ಬಂಟ್ವಾಳ: ಸರಿ ಸುಮಾರು 4 ದಶಕಗಳ ಬಳಿಕ ಪ್ರವಾಹದಿಂದ ಬಂಟ್ವಾಳ ಪೇಟೆ ದ್ವೀಪವಾಗಿದ್ದು,ಜನಜೀವನ ಅಸ್ತವ್ಯಸ್ತವಾಗಿತ್ತು.ಶನಿವಾರ ಸಂಜೆಯ ವೇಳೆ ನೀರು ಇಳಿಮುಖವಾದ ಬಳಿಕ ಬಂಟ್ವಾಳ ಸಹಜ ಸ್ಥಿತಿಗೆ ತಲುಪಿತು ಶುಕ್ರವಾರ ರಾತ್ರಿ ವೇಳೆ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಬಂಟ್ವಾಳ ನಗರವನ್ನು ಪ್ರವೇಶಿಸುವ ಬಡ್ಡಕಟ್ಟೆ,ಕೊಟ್ರಮಣಗಂಡಿ,ಬಸ್ತಿಪಡ್ ಪು ಭಾಗದಲ್ಲಿ ರಸ್ತೆಯು ಜಲಾವೃತಗೊಂಡು ಶನಿವಾರ ಸಂಜೆಯ ವರೆಗೂ ಬಂಟ್ವಾಳ ನಗರ ಪ್ರದೇಶ ದ್ವೀಪದಂತಾಗಿತ್ತು.
ಬಡ್ಡಕಟ್ಟೆ,ಬಸ್ ತಿಪಡ್ಪು,ಕೊಟ್ರಮಣಗಂಡಿಯಾಗಿ ಬರುವಂತ ಎಲ್ಲಾ ವಾಹನಗಳು ಏಕೈಕ ಪರ್ಯಾಯ ರಸ್ತೆಯಾದ ನೆರೆವಿಮೋಚನಾ ರಸ್ತೆಯನ್ನು ಬಳಸಿಕೊಂಡು ಬಂಟ್ವಾಳ ನಗರ ವನ್ನು ಪ್ರವೇಶಿಸಿದ್ದವು.1974ರ ಪ್ರವಾಹದ ಬಳಿಕ ಸಾಕಷ್ಟು ಬಾರಿ ಪ್ರವಾಹ ಬಂದಿತ್ತಾದರೂ,1983 ರಲ್ಲಿ ಬಂದಿದ್ದ ಪ್ರವಾಹ ಇದೇ ರೀತಿಯಾಗಿ ಬಂದಿದ್ದು,ಆಗ ಬಂಟ್ವಾಳ ನಗರ ದ್ವೀಪವಾಗಿ ಕಾಣಿಸಿಕೊಂಡಿತ್ತು. ಆ ಬಳಿಕ ಅಗಿನ ದಾಖಲೆಯನ್ನು ಮೀರಿ 11.7 ಮೀ.ನಷ್ಟು ಪ್ರಮಾಣದಲ್ಲಿ ನೇತ್ರಾವತಿ ಉಕ್ಕಿ ಹರಿದಿದ್ದು,ಮತ್ತೊಮ್ಮೆ ಪ್ರವಾಹದಿಂದ ಬಂಟ್ವಾಳ ದ್ವೀಪವಾಯಿತು. ಬಡ್ಡಕಟ್ಟೆಯಿಂದ ಮಾರ್ಕೆಟ್ ರಸ್ತೆಯದ್ದಕ್ಕು ಇರುವ ಅಂಗಡಿಯೊಳಗೆ ನೀರು ನುಗ್ಗಿದ್ದು,ವರ್ತಕರು ತಮ್ಮ ಸಾಮಾಗ್ರಿಗಳನ್ನು ಖಾಲಿ ಮಾಡಬೇಕಾಯಿತು.
ಬಂಟ್ವಾಳ ಪೇಟೆ ಪ್ರವಾಹದಿಂದಾಗಿ ದ್ವೀಪವಾದ ಸುದ್ದಿಯಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕುತೂಹಲಿಗರು ಶನಿವಾರ ಬೆಳಗ್ಗಿನವರೆಗೂ ಅಗಮಿಸಿ ನೇತ್ರಾವತಿಯ ಪ್ರವಾಹದ ಅಬ್ಬರವನ್ನು ವೀಕ್ಷಿಸುತ್ತಿದ್ದರು.

ಬೆಳಗ್ಗಿನಿಂದ ಇಳಿಮುಖ:
ಶನಿವಾರ ಬೆಳಿಗ್ಗೆ ಬೆಳಗ್ಗೆ ಭಾರೀ ಗಾಳಿ- ಮಳೆಯ ಅಬ್ಬರವಿದ್ದರೂ, ಸುಮಾರು 6 ಗಂಟೆಯ ನಂತರ ಪ್ರವಾಹದ ಅಬ್ಬರ ಇಳಿಮುಖವಾಗ ತೊಡಗಿತು. ಕಳೆದ ವರ್ಷ ನಾಗರಪಂಚಮಿಯಂದೆ ನೇತ್ರಾವತಿ ನದಿ ಅಪಾಯದಮಟ್ಟವನ್ನು ಮೀರಿ ಅಂದರೆ 10.7 ಮೀ.ನಲ್ಲಿ ಹರಿದಿತ್ತು.ಈ ವರ್ಷ ನಾಗರಪಂಚಮಿ ಕಳೆದ ಬಳಿಕ ವರಮಹಾಲಕ್ಷ್ಮೀ ಪೂಜೆಯಂದು ಪ್ರವಾಹ ಬಂದಿದ್ದು,ಕಳೆದ ವರ್ಷದ ದಾಖಲೆಯನ್ನು ಮುರಿದು 11.7 ಮೀ.ನಷ್ಟು ನೇತ್ರಾವತಿ ನದಿ ನೀರು ಹರಿದಿದೆ.

ಪೂಜಾರಿ ಮನೆ ಜಲಾವೃತ :
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಬಿ.ಮೂಡ ಗ್ರಾಮದ ಗಾಣದಪಡ್ಪು ಬಳಿರುವ ಮನೆಗೂ ನೆರೆ ನೀರು ನುಗ್ಗಿದ್ದು, ಜನಾರ್ಧನ ಪೂಜಾರಿಯವರ ಸಹಿತ ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬಂಟ್ವಾಳ ಬಂಟರ ಭವನದ ತಳಭಾಗ ಜಲಾವೃತಗೊಂಡರೆ, ತಲಪಾಡಿ ಡೈಮೆಂಡ್ ಸ್ಕೂಲ್, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರಕ್ಕೂ ನೀರು ನುಗ್ಗಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡ ಹಿನ್ನಲೆಯಲ್ಲಿ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನಗಳ ಓಡಾಟ ವಿರಳ: ಪ್ರವಾಹದ ಹಿನ್ನಲೆಯಲ್ಲಿ ಆಟೋರಿಕ್ಷಾ,ಬಸ್ ಗಳ ಓಡಾಟ ಕಡಿಮೆ ಇತ್ತು.ಹಾಗೆಯೇ ತಿಂಗಳ ಎರಡನೆ ಶನಿವಾರ ರಜೆ ಇದ್ದುದರಿಂದ ಜನಸಂಚಾರವು ವಿರಳವಾಗಿತ್ತು.

ಗಂಜಿ ಕೇಂದ್ರದಲ್ಲಿ ಸಂತ್ರಸ್ಥರು:
ಬಂಟ್ವಾಳ ಪ್ರವಾಸಿ ಮಂದಿರ ಹಾಗೂ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿದ್ದು,ಸಾವಿರಕ್ಕೂ ಅಧಿಕ ಮಂದಿ ಗಂಜಿಕೇಂದ್ರದಲ್ಲಿ ತಂಗಿದ್ದರು.ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ತಂಡ ಗಂಜಿಕೇಂದ್ರಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದರು. 

ತಡರಾತ್ರಿವರೆಗೂ ಮೊಕ್ಕಾಂ:
ಶಾಸಕ ರಾಜೇಶ್ ನಾಯ್ಕ್ಪುರಸಭಾ ಸದಸ್ಯ ಗೋವಿಂದಪ್ರಭು,ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಪುರುಷೋತ್ತಮ ಶೆಟ್ಟಿ ವಾಮದಪದವು,ಸುದರ್ಶನ್ ಬಜ,ರಮಾನಾಥ ರಾಯಿ,ಪವನ್ ಕುಮಾರ್ ಶೆಟ್ಟಿ ಮುತ್ತೂರು ಅವರನ್ನೊಳಗೊಂಡ ತಂಡ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡರಲ್ಲದೆ ತಡರಾತ್ರಿ ವರೆಗೂ ಬಿ.ಸಿ.ರೋಡಿನಲ್ಲಿರುವ ತಮ್ನ ಕಾರ್ಯಾಲಯದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಖುದ್ದು ಹಾಜರಿದ್ದು,ಅಧಿಕಾರಿಗಳ ಸಂಪರ್ಕದಲ್ಲಿದ್ದರಲ್ಲದೆ, ಸಲಹೆ ಸೂಚನೆಗಳನ್ನು ನೀಡುತ್ತಲೇ ಇದ್ದರು. ಸಂತ್ರಸ್ಥರಿಂದ ಬರುತ್ತಿದ್ದ ಕರೆಗಳಿಗೆ ಖುದ್ದು ಶಾಸಕರು ಸ್ಪಂದಿಸಿ,ಅಧಿಕಾರಿಗಳಿಗೆ ಸೂಚನೆ ನೀಡಿತ್ತಲೇ ಇದ್ದರು.

ಕಳೆದ ಏಳು ದಿನಗಳಿಂದ ಹಗಲೂ ರಾತ್ರಿ ತಾಲೂಕಾಡಳಿತ ತಹಶಿಲ್ದಾರ್ ರಶ್ಮಿ ಎಸ್. ಆರ್ ನೇತೃತ್ವದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಯಿಂದ ಸಂಭಾವ್ಯ ಅನಾಹುತಗಳಾಗುವ ಸ್ಥಳಗಳನ್ನು ಗುರುತಿಸಿ ಅವರಿಗೆ ಎಚ್ಚರಿಕೆಯನ್ನು ನೀಡಲಾಯಿತು. ಗಮಳೆ ತೀವ್ರಗೊಂಡ ಸಂದರ್ಭ ಖುದ್ದು ತಹಶೀಲ್ದಾರ್ ಹಗಲು, ರಾತ್ರಿ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷತೆಯ ಕುರಿತು ಕಾಳಜಿ ವಹಿಸಿದ್ದರು. ಇವರೊಂದಿಗೆ ಪುರಸಭೆಯ ಸಿಬ್ಬಂದಿ ಗಂಜಿಕೇಂದ್ರಗಳ ಉಸ್ತುವಾರಿಯನ್ನೂ ನೋಡಿಕೊಂಡರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಂಡರು. ಸುರಿಯುವ ಮಳೆಗೂ ತಾಲೂಕಾಡಳಿತ ನಡೆಸಿದ ಪರಿಹಾರ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾದವು. ಇಲಾಖೆಯ ಅಧಿಕಾರಿಗಳಾದ ರಾಮ ಕಾಟಿಪಳ್ಳ, ನವೀನ ಬೆಂಜನಪದವು, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ಯತೀಶ್, ಪುರಸಭೆಯ ಸಿಬ್ಬಂದಿ ಇಕ್ಬಾಲ್, ಮೋಹನ್ ಭಟ್,ಡೊಮೆನಿಕ್ ಡಿಮೆಲ್ಲೊ ಮತ್ತಿತರರು ವಿವಿಧ ಕೇಂದ್ರಗಳ ಉಸ್ತುವಾರಿ ನೋಡಿಕೊಂಡರು. 

ಬಾಕ್ಸ್ : ಹೆಲ್ಪ ಲೈನ್ ತೆರವು: ಶಾಸಕ ಯು.ರಾಜೇಶ್ ನಾಯ್ಕ್ ಅವರು ಸಂತ್ರಸ್ಥರ ತುರ್ತು ನೆರವಿಗಾಗಿ ಬಿ.ಸಿ.ರೋಡಿನಲ್ಲಿರುವ ತಮ್ಮ ಕಾರ್ಯಾಲಯದಲ್ಲಿ 24*7 ಹೆಲ್ಪ್ ಲೈನ್ ತೆರೆಯಲಾಗಿದೆ. ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗುವ ಸಂತ್ರಸ್ಥರು 

ಯಾವುದೇ ಸಮಸ್ಯೆ ಉಂಟಾದರೆ ಬಂಟ್ವಾಳ ಶಾಸಕರ ಕಚೇರಿಯ ದೂರವಾಣಿ ಸಂಖ್ಯೆ 08255 298613, 98450 83470, 9901810250, 9448122501, ನಂಬರ್ ಗೆ ಕರೆ ಮಾಡುವಂತೆ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಿದ್ಯುತ್ ಇಲ್ಲದೆ ಪರದಾಟ: ಗಾಳಿ,ಮಳೆ ,ಪ್ರವಾಹದ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ 8 ಗಂಟೆಯವೇಳೆಗೆ ಕಡಿತಗೊಂಡ ವಿದ್ಯುತ್ ಶನಿವಾರ ಸಂಜೆಯವರೆಗೂ ಬಂದಿರಲಿಲ್ಲ.ಪ್ರವಾಹದಿಂದಾಗಿ ಬಂಟ್ವಾಳದ ಕೆಲವೆಡೆ ಟ್ರಾನ್ಸ್ ಫಾರ್ಮರ್ ಗೆ ಹಾನಿಯಾದ,ಮುಳುಗಡೆಯಾದ ಬಗ್ಗೆ ವರದಿಯಾಗಿದೆ.


