ಬಂಟ್ವಾಳ :ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ದೇವರಾಜು ಅರಸು ಬಾಲಕರ ಹಾಸ್ಟೆಲ್ ಕಟ್ಟಡ ಇದೀಗ ಸುರಿಯುತ್ತಿರುವ ಮಳೆಗೆ ಭಾಗಶಃ ಕುಸಿದು ಬಿದ್ದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿದ್ದು, ಬಂಗ್ಲೆಗುಡ್ಡೆಯ ಪುರಸಭಾ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ ಬಾಲಕರ ಹಾಸ್ಟೆಲ್ ಕಟ್ಟಡ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ , ಕುಸಿಯುವ ಭೀತಿ ಎದುರಿಸುತ್ತಿತ್ತು. ತೀವ್ರ ನಾದುಸ್ತಿತಿಯಲ್ಲಿರುವ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳ ವಾಸ ಅಪಾಯಕಾರಿ ಎಂದರಿತು ಕಳೆದ ತಿಂಗಳು ಇಲ್ಲಿನ ವಿದ್ಯಾರ್ಥಿಗಳನ್ನು ಮೊಗರ್ನಾಡುವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಅಪಾಯಕಾರಿ ಹಾಸ್ಟೆಲ್ ಕಟ್ಟಡವನ್ನು ಇತ್ತೀಚೆಗೆ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ, ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಸಹಿತ ವಿವಿಧ ಜನಪ್ರತಿನಿಧಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಕಟ್ಟಡದ ಬಗ್ಗೆ ಪೂರಕ ಮಾಹಿತಿ ಪಡೆದುಕೊಂಡಿದ್ದರಲ್ಲದೆ,ಈಗಾಗಲೇ ಗುರುತಿಸಲಾದ ಜಮೀನಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದ್ದರು.
ಇದೀಗ ಮುಂಗಾರು ಕೊಂಚ ಚುರುಕುಗೊಂಡ ಪರಿಣಾಮ ಹಾಸ್ಟೆಲ್ ಕಟ್ಟಡದ ಮಾಡು ಕುಸಿಯಲು ಪ್ರಾರಂಭಿಸಿದೆ. ಕಟ್ಟಡದ ಮುಂಭಾಗದ ಮಾಡಿನಿಂದ ಕೆಲವು ಹಂಚು, ರೀಪು, ಪಕ್ಕಾಸುಗಳು ಮುರಿದು ಬಿದ್ದಿದ್ದು, ಕಟ್ಟಡ ಕುಸಿದು ಬೀಳುವ ಮುಂಚಿತವಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಶಿಥಿಲ ಕಟ್ಟಡದ ಸಮೀಪದಲ್ಲೇ ಹುಡುಗಿಯರು ವಾಸವಾಗಿರುವ ಹಾಸ್ಟೆಲ್ ಕಟ್ಟಡ ಹಾಗೂ ಅಂಗನವಾಡಿಯೂ ಇರುವುದರಿಂದ ಇದರ ಅಂಗಳದಲ್ಲಿ ವಿದ್ಯಾರ್ಥಿಗಳ ಹಾಗೂ ಅಂಗನವಾಡಿಗಳ ಮಕ್ಕಳು ಪ್ರತಿನಿತ್ಯ ಇಲ್ಲಿ ಓಡಾಡುವುದರಿಂದ ಅಪಾಯದ ಬಗ್ಗೆಯೂ ಆತಂಕ ಪಡಲಾಗುತ್ತಿದೆ.


