ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾ ಎಂಬಲ್ಲಿ ಶುಕ್ರವಾರ ಕೊರೆದ ಸಾರ್ವಜನಿಕ ಕೊಳವೆ ಬಾವಿಯಿಂದ ನೀರು ಉಕ್ಕಿ ಬಂದ ಪರಿಣಾಮ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸತ್ತಿದ್ದ ನಾಗರಿಕರು ಕೊನೆಗೂ ಸಂತಸಗೊಂಡಿದ್ದಾರೆ. 
ಕಳೆದ ಒಂದು ವರ್ಷದ ಹಿಂದೆ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ನದಿಯಲ್ಲಿ ಆರಂಭಗೊಂಡಿದ್ದ ತಾಲ್ಲೂಕಿನ ಪ್ರಥಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈ ಬಾರಿ ನದಿಯಲ್ಲಿ ನೀರಿನ ಕೊರತೆ ನೆಪದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಇದೇ ವೇಳೆ ಇಲ್ಲಿನ ಕನ್ಯಾ ಎಂಬಲ್ಲಿ ಸಾರ್ವಜನಿಕ ಕೊಳವೆ ಬಾವಿ ಬತ್ತಿ ಹೋಗಿದ್ದರೆ, ಕೈತ್ರೋಡಿ ಸಮೀಪದ ಕಂಬಳದಡ್ಡ ಎಂಬಲ್ಲಿ ಪಂಪ್ ಕೈ ಕೊಟ್ಟಿತ್ತು. ಇದರಿಂದಾಗಿ ಆತಂಕಗೊಂಡ ರಾಯಿ ಗ್ರಾಮ ಪಂಚಾಯಿತಿ ಸದಸ್ಯರು ಕೆಲವು ದಿನಗಳ ಹಿಂದೆ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರ ಮೊರೆ ಹೋಗಿದ್ದರು. ಇದೀಗ ಟಾಸ್ಕ್ಫೋಸರ್್ ಯೋಜನೆಯಡಿ ಶುಕ್ರವಾರ ಕೊರೆದ ಕೊಳವೆಬಾವಿಯಲ್ಲಿ 160 ಅಡಿ ಆಳದಲ್ಲೇ ನೀರು ಕಂಡು ಬಂದಿದ್ದು, ಬಳಿಕ 480 ಅಡಿ ಕೊರೆದಾಗ ಸುಮಾರು 4 ಅಡಿಗಿಂತಲೂ ಹೆಚ್ಚು ನೀರು ಉಕ್ಕಿ ಬಂದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ತಿಳಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಬಂದು ಕುತೂಹಲದಿಂದ ವೀಕ್ಷಿಸಿ ಪರಸ್ಪರ ಸಂತಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಪ್ರಮುಖರಾದ ಮಧುಕರ ಬಂಗೇರ, ಕೆ.ಪರಮೇಶ್ವರ ಪೂಜಾರಿ, ಕಾಂತಪ್ಪ ಮಾಬೆಟ್ಟು ಮತ್ತಿತರ ಸ್ಥಳೀಯರು ಇದ್ದರು.
