ಬಜ್ಪೆ : ಮನುಷ್ಯ ಆಯುಷ್ಯ ಕಳೆದಂತೆ ಮೃದುವಾಗುತ್ತಾನೆ. ಆದರೆ ಸಂಸ್ಥೆಗಳು ವರ್ಷ ಕಳೆದಂತೆ ಬಲಯುತಗೊಳ್ಳುತ್ತವೆ. 75ರ ಸಾಧನೆ ಎಂದರೆ ಸೇವಾ ಸಾರ್ಥಕತೆ ಎಂದರ್ಥ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಫಲ್ಯ ಸೇವಾ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದ ಸ್ವಾಮೀಜಿ, ದೇವರ ದೀಪಗಳು ಉರಿಯಲು ತೈಲಧಾರೆ ಕುಲಕಸುಬು ಅವಲಂಬಿಸಿರುವ ಈ ಸಮಾಜ ಸರಳ ಜೀವನಕ್ಕೆ ಮಾದರಿ. ತಮ್ಮ ಮಕ್ಕಳು ಈ ಪುಣ್ಯದ ಕೆಲಸ ಮುಂದುವರಿಸಲಿ ಎಂದರು.
ಉಳ್ಳಾಲದ ಶ್ರೀ ಉಲ್ಲಾಳ್ತಿ ಧರ್ಮರಸು ಕ್ಷೇತ್ರದ ಧರ್ಮದರ್ಶಿ ದೇವು ಮೂಲಿಯಣ್ಣರ ಉಪಸ್ಥಿತಿ ಹಾಗೂ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಎಂ ಜಿ ಕರ್ಕೇರ ಅಧ್ಯಕ್ಷತೆಯಲ್ಲಿ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಯತೀಶ್ ಅತ್ತಾವರ, ಪದ್ಮನಾಭ ಪಯ್ಯಡೆ, ಸುಂದರ ಸಾಲ್ಯಾನ್ ಇದ್ದರು. ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಆಸ್ರಣ್ಣರು ತೆಂಗು-ಕಂಗು ವೃಕ್ಷಪುಷ್ಪ ಅರಳಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಕಲಿಯುಗದಲ್ಲಿ ಸಂಘಟನೆ ನಿಜವಾದ ಶಕ್ತಿಯಾಗಿದೆ. ಜಾತಿ ಸಂಘಟನೆಗಳು ಬಲಿಷ್ಠವಾಗಬೇಕು. ಸಮಾಜ ಒಗ್ಗೂಡಿಸುವ ಬಹು ದೊಡ್ಡ ಸವಾಲು ಸಂಸ್ಥೆಗಳಿಗಿವೆ. ಪ್ರತಿಯೊಬ್ಬರಲ್ಲೂ ದೇಶಾಭಿಮಾನ, ಭಾಷಾಭಿಮಾನ, ಸಂಸ್ಕøತಿ ಉಳಿಸುವ ಉತ್ಕಟತೆ ಇರಬೇಕು ಎಂದು ಕಮಲಾದೇವಿ ಆಸ್ರಣ್ಣ ಹೇಳಿದರು.
ಈ ಸಂದರ್ಭದಲ್ಲಿ ರಘುವೀರ ಅತ್ತಾವರ, ಶಶಿಕಲಾ ರಘುವೀರ, ವಾಸು ಪುತ್ರನ್, ಶಕುಂತಲಾ, ಸದಾನಂದ ಸಫಲಿಗ, ಮಲ್ಲಿಕಾ ಸದಾನಂದ, ಕು. ತನ್ವಿ ಜಗದೀಶ, ವಾಮನ ಎಸ್ ಸಾಫಲ್ಯ, ಆರ್ ಸಿ ಮೂಲ್ಕಿ, ಸುಕನ್ಯಾ ಕಮಲಾದೇವಿ, ರೇಖಾ ಮೂಲಿಯಣ್ಣ, ಗಿರಿಯಪ್ಪ ಕರ್ಕೇರ, ಸುರೇಶ್ ಕೊಪ್ಪಳ, ರಾಜೇಶ ಗುರಿಕಾರ, ತುಳಸೀದಾಸ ಸಫಲಿಗರನ್ನು ಸಂಘದ ಪರವಾಗಿ ಗೌರವಿಸಲಾಯಿತು. ಬಳಿಕ ಸಂಘದ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು.
