ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿಭಾಗದಲ್ಲಿರುವ ಆರಂಬೋಡಿ ಗ್ರಾಮದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿಯಲ್ಲಿ ಹೊನಲು ಬೆಳಕಿನ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ 22ರಂದು ನಡೆಯಲಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ನಡೆಯುತ್ತಿದೆ.
ತಾಲ್ಲೂಕಿನಲ್ಲಿ ಪ್ರಥಮ ಕಂಬಳ ಈಗಾಗಲೇ ಕಕ್ಯಪದವು ಮೈರ ಎಂಬಲ್ಲಿ ನಡೆದಿದ್ದು, ಹೊಕ್ಕಾಡಿಗೋಳಿ ಕಂಬಳವು ಎರಡನೇ ಕಂಬಳವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಪೂಂಜ ಶ್ರೀ ಪಂಚ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಹೊಕ್ಕಾಡಿಗೋಳಿ ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು ಹೊಂದಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದೆ.
ಯುವ ಉದ್ಯಮಿ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ನೇತೃತ್ವದಲ್ಲಿ ಈಗಾಗಲೇ ವಿವಿಧ ಸಮಿತಿ ಮತ್ತು ಉಪ ಸಮಿತಿ ರಚಿಸಲಾಗಿದ್ದು, ಕಂಬಳ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.
