ಬಂಟ್ವಾಳ:ಇಲ್ಲಿನ ಬಿ.ಸಿ.ರೋಡ್ ಮಿನಿ ವಿಧಾನ ಸೌಧ ಬಳಿ ಕಳೆದ ಒಂದು ವರ್ಷದಿಂದ ನಿರ್ಮಾಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಎದುರು ಆವರಣಗೋಡೆ ನಿರ್ಮಿಸಲು ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಜೆಡಿಎಸ್ ಜಂಟಿಯಾಗಿ ಬುಧವಾರ ಸಂಜೆ ದಿಡೀರ್ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಆರಂಭದಲ್ಲಿ ಪ್ರತಿಭಟನಾಕಾರರು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತು ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ವಿರುದ್ಧ ಧಿಕ್ಕಾರ ಕೂಗಿ, ಇವರು ಬಡಜನರ ಇಂದಿರಾ ಕ್ಯಾಂಟೀನು ನಿರ್ಮಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಭೇಟಿ ನೀಡಿದ ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರೊಂದಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮುಂದಿನ ಒಂದು ದಿನದೊಳಗೆ ಇಂದಿರಾ ಕ್ಯಾಂಟೀನ್ಗೆ ಆವರಣ ಗೋಡೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಶುಕ್ರವಾರ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ನಾನು ಮಿನಿ ವಿಧಾನ ಸೌಧ ಎದುರು ಮತ್ತೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಮಾತ್ರವಲ್ಲದೆ ಬಿ.ಸಿ.ರೋಡು-ಕೈಕುಂಜೆ ರಸ್ತೆ ಬದಿ ಇರುವ ಎಲ್ಲಾ ಅನಧಿಕೃತ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ಮಹಿಳಾ ಅಧಿಕಾರಿ ಸಹಿತ ಅವರನ್ನು ದಬಾಯಿಸಿ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಮತ್ತು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಪರಾಮರ್ಶಿ ನಡೆಸಿದ ಬಳಿಕ ಆವರಣಗೋಡೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಕಮಿಷನರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಪ್ರಮುಖರಾದ ಕೆ.ಪದ್ಮನಾಭ ರೈ, ಪಿ.ರಾಮಕೃಷ್ಣ ಆಳ್ವ, ಮಾಧವ ಎಸ್.ಮಾವೆ, ಸದಾಶಿವ ಬಂಗೇರ, ಜಗದೀಶ ಕೊಯಿಲ, ಮಲ್ಲಿಕಾ ವಿ.ಶೆಟ್ಟಿ , ಜಯಂತಿ ಪೂಜಾರಿ, ಜೋಸ್ಪಿನ್ ಡಿಸೋಜ, ಪ್ರಭಾ ಆರ್. ಸಾಲ್ಯಾನ್ ಜಗದೀಶ ಕುಂದರ್, ಗಂಗಾಧರ ಪೂಜಾರಿ, ಚಂದ್ರಶೇಖರ ಪೂಜಾರಿ, ವಾಸು ಪೂಜಾರಿ, ಸಚ್ಚಿದಾನಂದ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಪ್ರಶಾಂತ ಕುಲಾಲ್, ಉಮೇಶ ಬೋಳಂತೂರು, ಮಹಮ್ಮದ್ ಶರೀಫ್, ಜೆಡಿಎಸ್ ಮುಖಂಡರಾದ ಬಿ.ಮೋಹನ್, ಹಾರೂನ್ ರಶೀದ್, ಮಹಮ್ಮದ್ ಶಫಿ ಮತ್ತಿತರರು ಇದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಎಎಸ್ಪಿ ಋಷಿಕೇಶ ಸೋನವಾಣೆ, ಗ್ರಾಮಾಂತರ ಠಾಣೆ ಎಸೈ ಪ್ರಸನ್ನ ಎಂ., ನಗರ ಠಾಣೆ ಎಸೈ ಚಂದ್ರಶೇಖರ್, ಕ್ರೈಂ ವಿಭಾಗ ಎಸೈ ಹರೀಶ್ ಸಹಿತ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.
