ಬಂಟ್ವಾಳ: ಸಮಾಜದಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರಗಳನ್ನು ಸೇವಿಸಿ ತನ್ನಷ್ಟಕ್ಕೆ ಜೀವಿಸುತ್ತಿರುವ ಪರಿಸರಕ್ಕೆ ಪೂರಕವಾಗಿರುವ ಪ್ರಾಣಿ ಪಕ್ಷಿಗಳ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆ ಮೂಲಕ ಅನಗತ್ಯವಾಗಿ ಪೋಲಾಗುವ ನೀರು ಮತ್ತಿತರ ಆಹಾರ ಪದಾರ್ಥಗಳನ್ನು ಪ್ರತೀ ಮನೆ ಮತ್ತು ಶಾಲಾ ವಠಾರದಲ್ಲಿ ಗುಬ್ಬಚ್ಚಿಯಂತಹ ಸಣ್ಣ ಪುಟ್ಟ ಹಕ್ಕಿಗಳಿಗೆ ಒದಗಿಸಬೇಕು ಎಂದು ಪರಿಸರ ಪ್ರೇಮಿ ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದ್ದಾರೆ.

bantwala news (4)
ಇಲ್ಲಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳ ಸಂಕುಲ ರಕ್ಷಣೆ ‘ಗುಬ್ಬಚ್ಚಿ ಗೂಡು’ ಕಾರ್ಯಕ್ರಮದಲ್ಲಿ ಅವರು ಪ್ರಾತ್ಯಕ್ಷಿಕೆ ಸಹಿತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ಗುಬ್ಬಚ್ಚಿ ಗೂಡು ಸಹಿತ ಆಹಾರ ಮತ್ತು ನೀರುಣಿಸುವ ಮಣ್ಣಿನ ಪಾತ್ರೆಯನ್ನು ಇಲ್ಲಿನ ಗಿಡ ಮರಗಳಿಗೆ ಉಚಿತವಾಗಿ ಅಳವಡಿಸಿದರು.

ಸಂಪನ್ಮೂಲ ವ್ಯಕ್ತಿ ರಮ್ಯಾ ಮಾತನಾಡಿ, ಮನುಷ್ಯರಂತೆ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬ ನೈಜ ಸತ್ಯ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ತಿಳಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ರಾಮಮೋಹನ್ ಶೆಟ್ಟಿ ಎಣ್ಮಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಲೋಚನಾ ಮತ್ತಿತರರು ಶುಭ ಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಹೇಮಲತಾ, ಸ್ಥಳೀಯರಾದ ಸುರೇಶ ಸಾಲ್ಯಾನ್, ಪುನೀತ್ ಸಿದ್ಧಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಮುಖ್ಯಶಿಕ್ಷಕಿ ವಿನಿತಾ ವಂದಿಸಿದರು. ಹಿರಿಯ ಶಿಕ್ಷಕಿ ನಾಗವೇಣಿ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *