ಮೂಡುಬಿದಿರೆ:ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ಸಿಗುತ್ತಿಲ್ಲ. ಅಲ್ಲಿನ ಸಿ¨ಂದಿಗಳು ಸರ್ವರ್ ಸಮಸ್ಯೆ ಹೇಳುತ್ತಾರೆ ನಾವು ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ ಎಂದು ಫಲಾನುಭವಿಗಳು ಸಮಸ್ಯೆ ತೋಡಿಕೊಂಡರು.

ಮೂಡುಬಿದಿರೆ ತಹಸೀಲ್ದಾರ್ ರಶ್ಮಿ ಎಂ. ಆರ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಎಸ್‍ಸಿಎಸ್‍ಟಿ ಸಮುದಾಯದ ಕುಂದು ಕೊರತೆಗಳ ಸಭೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಿಂದ ಲಾಡಿಯಲ್ಲಿ ನಡೆಸಲ್ಪಡುವ ವಿದ್ಯಾರ್ಥಿನಿಯರ ಹಾಸ್ಟೆಲ್‍ನ ಶೌಚಾಲಯ ಸರಿಯಿಲ್ಲ. ಗುಣಮಟ್ಟದ ಆಹಾರವೂ ಮಕ್ಕಳಿಗೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದೂ ದಲಿತ ಮುಖಂಡ ಶೀನ ಮಾಸ್ತಿಕಟ್ಟೆ ಒತ್ತಾಯಿಸಿದರು.
ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸುವುದಾಗಿ ರಶ್ಮಿ ಎಂ. ಆರ್ ಉತ್ತರಿಸಿದರು. ಶಿರ್ತಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಇಲ್ಲಿ ವೈದ್ಯರಿಲ್ಲ. ಹಲವಾರು ಗ್ರಾಮಗಳ ಜನರು ಈ ಆಸ್ಪತ್ರೆಯನ್ನು ಆಶ್ರಯಿಸಿದ್ದು ಇಲ್ಲಿಗೆ ವೈದ್ಯರನ್ನು ನೇಮಿಸಬೇಕು ಎಂದು ಕೆಲವರು ಬೇಡಿಕೆ ಸಲ್ಲಿಸಿದರು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್ ಉತ್ತರಿಸಿದರು.
ಈ ಬಗ್ಗೆ ಕಂಪ್ಯೂಟರ್ ಆಪರೇಟರ್‍ಗೆ ಲಿಖಿತ ಪತ್ರ ಬರೆದು ಸಮಸ್ಯೆಯನ್ನು ತಿಳಿದುಕೊಳ್ಳುವಂತೆ ಸಂಬಂಧಿತ ಅಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು. ಶಿಕ್ಷಣ ಇಲಾಖೆಯು ಎಸ್‍ಸಿಎಸ್‍ಟಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುತ್ತಿದ್ದು ಅದಕ್ಕೆ ವ್ಯಾರಂಟಿ ಕಾರ್ಡು ನೀಡುತ್ತಿಲ್ಲ. ಲ್ಯಾಪ್‍ಟಾಪ್ ಕೆಟ್ಟು ಹೋದಲ್ಲಿ ಅದನ್ನು ದುರಸ್ಥಿ ಪಡಿಸಲು, ಹೊಸ ಬಿಡಿ ಭಾಗಗಳನ್ನು ಅಳವಡಿಸಲು ದುಡ್ಡಿಲ್ಲದೆ ಅದು ಉಪಯೋಗಕ್ಕೆ ಬಾರದಂತಾಗುತ್ತದೆ. ಲ್ಯಾಪ್‍ಟಾಪ್ ಜೊತೆ ವ್ಯಾರಂಟಿ ಕಾರ್ಡನ್ನು ನೀಡಬೇಕು ಶೀನ ಮಾಸ್ತಿಕಟ್ಟೆ ಅಧಿಕಾರಿಗಳ ಗಮನಸೆಳೆದರು.

ಬೆಳುವಾಯಿ ದಲಿತ ಕಾಲನಿ ಸಮೀಪ ಅಂಗಡಿ, ಮನೆಗಳಲ್ಲಿ ಶರಾಬು ಮಾರಾಟ ಮಾಡುತ್ತಾರೆ. ಇದರ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದರೆ ದೂರುದಾರರ ಮಾಹಿತಿಯನ್ನೇ ಮಾರಾಟಗಾರರಿಗೆ ಅಧಿಕಾರಿಗಳು ತಿಳಿಸುತ್ತಾರೆ. ಮಾರಾಟಗಾರರಿಗೆ ಮುಂಚಿತವಾಗಿ ಮಾಹಿತಿ ನೀಡಿ ದಾಳಿಯ ನಾಟಕವಾಡುತ್ತಾರೆ ಎಂದು ತಾ.ಪಂ. ಮಾಜಿ ಸದಸ್ಯ ವಿಜಯ ದೂರಿದರು. ಈ ಬಗ್ಗೆ ಲಿಖಿತ ದೂರು ನೀಡುವಂತೆ ತಹಸೀಲ್ದಾರರು ಸೂಚಿಸಿದರು. ಪುತ್ತಿಗೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಶೇಂದಿಯಂಗಡಿ ತೆರೆದಿದ್ದು ಅದರ ವಿರುದ್ದ ಹೋರಾಟ ನಡೆಸಿದರೂ ತೆರವುಗೊಳಿಸಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ತೆರವಾಗಿದ್ದರೂ ಅಲ್ಲಿ ಈಗ ಶೇಂದಿ ದಾಸ್ತಾನು ಮಾಡಿ ಬೇರೆಡೆ ಮಾರಾಟ ಮಾಡುತ್ತಾರೆ. ಇದನ್ನು ತೆರವುಗೊಳಿಸಬೇಕು ಎಂದು ಜಿನ್ನಪ್ಪ ಬಂಗೇರ ಒತ್ತಾಯಿಸಿದರು. ಕೆಲವು ದಲಿತ ಕಾಲೊನಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಅದನ್ನು ದುರಸ್ತಿಪಡಿಸುತ್ತಿಲ್ಲ ಅದರ ನಿರ್ವಹಣೆಯೂ ಆಗುತ್ತಿಲ್ಲ ಎಂದು ಕೆಲವರು ದೂರಿದರು. ತಾ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್, ಕ್ರೈಂ ವಿಭಾಗದ ಉಪ ನಿರೀಕ್ಷಕ ಶಂಕರ ನಾಯರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಪಿಡಿಒಗಳು ಉಪಸ್ಥಿತರಿದ್ದರು.
