ಮೂಡುಬಿದಿರೆ: ಬಿಜೆಪಿ ಮೂಲ್ಕಿ ಮೂಡುಬಿದಿರೆ ಪ್ರಖಂಡದ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಟಲ್ ಬಿಹಾರಿ ವಾಜಪೇಯಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಅಟಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.

ವಾಜಪೇಯಿ ಸಮರ್ಥ ಆಡಳಿತದ ಮೂಲಕ ದೇಶವನ್ನು ನಿಜ ಅರ್ಥದಲ್ಲಿ ಪ್ರಕಾಶಿಸುವಂತೆ ಮಾಡಿದ ರಾಜಕೀಯ ಮುತ್ಸದ್ಧಿಯಾಗಿದ್ದರು. ಅವರು ರಾಜಧರ್ಮಕ್ಕಿಂತ ರಾಷ್ಟ್ರ ಧರ್ಮಕ್ಕೆ ಆದ್ಯತೆ ನೀಡಿದ್ದರು ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಹಿಂದೂಗಳ ರಕ್ಷಣೆಗಾಗಿ ಜನಸಂಘವನ್ನು ಸ್ಥಾಪಿಸಿದ್ದ ಅವರು ಬಳಿಕ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದರು. ತನ್ನ ಪರಮ ಶಿಷ್ಯ ಮೋದಿಯವರು ಈಗ ಪ್ರಧಾನ ಮಂತ್ರಿಯಾಗಿರುವುದರ ಹಿಂದಿನ ಪ್ರೇರಕ ಶಕ್ತಿ ವಾಜಪೇಯಿ ಆಗಿದ್ದರು. ರಾಜಕೀಯದಲ್ಲಿ ಪ್ರಾಮಾಣಿಕತೆಯ ರಾಜಕಾರಣದ ಮೂಲಕವೂ ಉತ್ತುಂಗಕ್ಕೆ ಏರಬಹುದು ಎಂಬುದಕ್ಕೆ ಅವರು ನಿದರ್ಶನವಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ, ನಾಯಕರಿಗೆ ಅವರು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರ ಯೋಚನೆ, ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಿದೆ ಎಂದರು.
ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಬಿಜೆಪಿ ಮುಖಂಡರಾದ ಎಂ. ಎಸ್. ಕೋಟ್ಯಾನ್, ಬಾಹುಬಲಿ ಪ್ರಸಾದ್ ಮತ್ತಿತರರು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖಂಡರಾದ ಭುವನಾಭಿರಾಮ ಉಡುಪ, ವಿವಿಧ ಪಂಚಾಯತ್‍ಗಳ ಅಧ್ಯಕ್ಷರು ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
