ಬಂಟ್ವಾಳ: ಇಲ್ಲಿಗೆ ಸಮೀಪದ ಲೊರೆಟ್ಟೊ ಪದವಿನ ಟಿಪ್ಪು ನಗರದಲ್ಲಿರುವ ಅಕ್ರಮ ಕಸಾಯಿಖಾನೆಗೆ ಗುರುವಾರ ಬೆಳಗ್ಗೆ ಎರಡನೇ ಬಾರಿಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ ಗೋಮಾಂಸ ವಶಪಡಿಸಿ, ವಧೆಗಾಗಿ ಕಟ್ಟಿಹಾಕಿದ್ದ ಒಂದು ದನವನ್ನು ರಕ್ಷಿಸಿದ್ದಾರೆ.
ದಾಳಿ ವೇಳೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಲೊರೆಟ್ಟೊ ನಿವಾಸಿಗಳಾದ ಆದಂ, ಅಹಮ್ಮದ್ ಬಾವ, ನಾಸೀರ್, ಮಹಮ್ಮದ್ ಮುಸ್ತಾಫಾ, ನಾಸೀರ್ ಹುಸೈನ್, ಲತೀಫ್ ಬಂಧಿತರು. ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೊ ಟಿಪ್ಪು ನಗರ ಎಂಬಲ್ಲಿ ಆದಂ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಪೊಲೀಸರ ತಂಡ ದಾಳಿ ನಡೆಸಿದೆ.
ಕಳೆದ ವಾರವು ಇದೇ ಪರಿಸರದಲ್ಲಿ ಅಕ್ರಮವಾಗಿ ಗೋವಧೆ ನಡೆಯುತ್ತಿದೆ ಎಂಬ ಮಾಹಿತಿಯನ್ವಯ ದಾಳಿ ನಡೆಸಿದ ಪೊಲೀಸರು ದನ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳು ಪರಾರಿಯಾಗಿದ್ದರು.
ಇದೀಗ ಎರಡನೇ ಬಾರಿಗೆ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್ ಅವರ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿದ್ದು ಆರು ಮಂದಿ ಆರೋಪಿಗಳನ್ನು ಬಂಧಿಸಿ 2.10 ಕೆ.ಜಿ.ಗೋಮಾಂಸ ವಶಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ, ಬಂಟ್ವಾಳ ನಗರ ಠಾಣೆಯ ಎ.ಎಸ್.ಐ. ಸಂಜೀವ, ಸಿಬ್ಬಂದಿಗಳಾದ ಕೃಷ್ಣ ಕುಲಾಲ್, ಸುರೇಶ್ ಪಡಾರ್, ನಾಗರಾಜ್, ಸುರೇಶ್ ಬಿ. ಮಲಿಕ್ ಸಾಬ್, ರಾಘವೇಂದ್ರ, ನಜೀರ್ ಮತ್ತು ಚಾಲಕ ಸಂಪತ್ ಭಾಗವಹಿಸಿದ್ದರು.


