ಎಡಪದವು: ಚರಂಡಿಯಲ್ಲಿ ಮರಳು ತುಂಬಿಕೊಂಡ ಕಾರಣ ಮಳೆಯ ನೀರು ಅಂಗಡಿಗೆ ನುಗ್ಗಿದ ಘಟನೆ ಮಳಲಿಯ ಜೋಡುತಡಮೆ ಎಂಬಲ್ಲಿ ನಡೆದಿದೆ.
ಗಂಜಿಮಠದಿಂದ ಮಳಲಿಗೆ ರಸ್ತೆ ಸಂಪರ್ಕಿಸುತ್ತಿದ್ದು, ಮಳೆಯ ನೀರು ಹೋಗಲೆಂದು ಜೋಡುತಡಮೆ ಎಂಬಲ್ಲಿ ತೆರೆದ ಚರಂಡಿ ತೆರೆಯಲಾಗಿದೆ. ಆದರೆ ಗಂಜಿಮಠ ಪ್ರದೇಶದ ನಾರ್ಲ, ಸೈಟ್ ಭಾಗದಲ್ಲಿ ಮರಳು ಸಂಗ್ರಹಿಸಿಟ್ಟಿದ್ದು, ಇದು ಭಾರೀ ಮಳೆಗೆ ನೀರಿನೊಂದಿಗೆ ಕೊಚ್ಚಿಕೊಂಡು ಚರಂಡಿಯನ್ನು ತುಂಬಿಕೊಂಡಿದೆ.
ಜೋರು ಮಳೆ ಬಂದಾಗ ಚರಂಡಿಯಲ್ಲಿ ಮರಳು ಮಿಶ್ರಿತ ನೀರು ಚರಂಡಿಯನ್ನು ಹಾದು ಜೋಡುತಡಮೆಯ ನಾರಾಯಣ, ಓಂದಾಸ್ ಮುಂತಾದವರ ಅಂಗಡಿಗೆ ನುಗ್ಗುವ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ನಿಂತಾಗ ಅಂಗಡಿ ಮಾಲಕರು ಚರಂಡಿಯಿಂದ ಮರಳೆತ್ತಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುತ್ತಾರೆ. ನಿತ್ಯವೂ ಇದೇ ರೀತಿ ನಡೆಯುತ್ತಿರುವುದರಿಂದ ಇಲ್ಲಿನವರು ಸಮಸ್ಯೆ ಎದರುಸುತ್ತಿದ್ದು, ಈ ಬಗ್ಗೆ ಪಂಚಾಯತ್ ನವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
