ಪೊಳಲಿ: ಶಾಸಕ ರಾಜೇಶ್ ನಾಯ್ಕ್ ಇತ್ತೀಚೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಪುಂಚಮೆಯಿಂದ ಕಲ್ಕುಡ ದೇವರಗುಡ್ಡೆ ಮೂಲಕ ಸಂಪರ್ಕ ಕಲ್ಪಿಸುವ ಎರಡು ಕಿ.ಮೀ. ಅಂತರದ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿ, ರಸ್ತೆ ವಿಸ್ತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯೂಡಿ ಇಂಜಿನಿಯರ್ ಗಳಿಗೆ ಸೂಚಿಸಿದ್ದಾರೆ.
ಈ ರಸ್ತೆಯಲ್ಲಿ ಹಾದು ಹೋಗಿರುವ ಕೊಳವೆಗೆ ಹೆಚ್ಚು ಹಾನಿಯಾಗದಂತೆ ಕಾಮಗಾರಿ ನಡೆಸಬೇಕೆಂದು ಸ್ಥಳೀಯಾಡಳಿತಕ್ಕೆ ಸೂಚಿಸಿದ ನಾಯ್ಕ್, ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಪೊಳಲಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೊಸ ರಸ್ತೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬರಲಿದೆ. ಪೊಳಲಿಯಿಂದಲೇ ರಾಜಕೀಯ ಆರಂಭಿಸಿದ ನಾನು ಪೊಳಲಿಗೆ ರಸ್ತೆ ಕಲ್ಪಿಸುವ ಮೂಲಕ ಕ್ಷೇತ್ರದ ಇತರ ರಸ್ತೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವೆ ಎಂದು ನಾಯ್ಕ್ ಹೇಳಿದರು.
ರಸ್ತೆ ವಿಷಯದ ಬಗ್ಗೆ ಪೊಳಲಿಯಲ್ಲಿ ನಡೆಸಿದ ಸಭೆಯಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಉಮೇಶ್ ಭಟ್,ಅರುಣ್ ಪ್ರಕಾಶ್, ಗುತ್ತಿಗೆದಾರ ಜೆ.ಡಿ.ಸುವರ್ಣ ಜಿಪಂ ಇಂಜಿನಿಯರ್ ಕೃಷ್ಣ , ಗುತ್ತಿಗೆದಾರ ಯಶೋಧರ ಮೊದಲಾದವರು ಇದ್ದರು.
ಇದಕ್ಕೂ ಮುಂಚೆ ಪೊಳಲಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಪರಿಶೀಲಿಸಿದ ನಾಯ್ಕ್, ಗಣ್ಯರೊಂದಿಗೆ ಚರ್ಚಿಸಿದರು. ನಾಯ್ಕ್ ಜೊತೆ ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ತಾಪಂ ಸದಸ್ಯ ಯಶವಂತ ಪೂಜಾರಿ, ಗ್ರಾಪಂ ಸದಸ್ಯ ಲೋಕೇಶ್ ಭರಣಿ, ವೆಂಕಟೇಶ್ ನಾವಡ, ಗೋಪಾಲ ಬಂಗೇರ , ಪವನ್ ಕುಮಾರ್, ನವೀನ್ , ಕುಮಾರ ಮೊದಲಾದವರಿದ್ದರು.




