ಬಂಟ್ವಾಳ: ಬಿಜೆಪಿಯ ಅಪಪ್ರಚಾರದಿಂದ ನನಗೆ ಸೋಲಾಗಿರಬಹುದು, ಆದರೆ ಇದರಿಂದ ಧೃತಿಗೆಡುವುದಿಲ್ಲ. ಜನಸೇವೆಗೆ ನಾನೆಂದೂ ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ತಾಲೂಕಿನ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನರ ಅಭಿವೃದ್ಧಿಗಾಗಿ ತಾನು ಶಕ್ತಿ ಮೀರಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ತನಗೆ ತೃಪ್ತಿಯೂ ಇದೆ ಎಂದ ಅವರು, ಕ್ಷೇತ್ರದ ಜನತೆ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ ಎಂದು ಸ್ಮರಿಸಿಕೊಂಡರು.
ಬಿಜೆಪಿಯವರು ಹಸಿಹಸಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ತನಗೆ ಸೋಲಾಯಿತು. ಅಲ್ಲದೆ, ಬಿಜೆಪಿಯವರು ತನ್ನ ಬಗ್ಗೆ ಹೇಳಿರುವ ವಿಷಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ಜ್ವಾಲಾಮುಖಿಯಾಗಿ ಎಷ್ಟೇ ಹರಡಿದರೂ, ಕೊನೆಯಲ್ಲಿ ಸತ್ಯವೇ ಗೆಲ್ಲಲಿದೆ. ಬಿಜೆಪಿ ಅವರ ಅಪ್ರಚಾರದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಅಲ್ಲದೆ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಯ ನೈಜ ಮುಖವಾಡವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಇಲ್ಲದಿದ್ದರೆ ಬಿಜೆಪಿಯವರು ಇನ್ನಷ್ಟು ಅಪಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣೆ ಫಲಿತಾಂಶ ಬಳಿಕ ಬಂಟ್ವಾಳದ ವಿವಿಧೆಡೆ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿವೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಷಡ್ಯಂತರ ಇದೆ. ಧರ್ಮ ಹಾಗೂ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಹಿಂಸಾ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಹಿರಿಯ ಮುಖಂಡ ಬಿ.ಎಚ್. ಖಾದರ್ ಮತ್ತಿತರರಿದ್ದರು.

