ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಮೇ 10ರಂದು ಬೆಳಿಗ್ಗೆ ಕುಡುಪು ಕೃಷ್ಣರಾಜ ತಂತ್ರಿಯವರಿಂದ ಪಾದುಕಾನ್ಯಾಸ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ, ಗಡಿಕಾರ ಪ್ರಮೋದ್ ರೈ, ದೈವದ ಪಾತ್ರಿಗಳಾದ ತನಿಯಪ್ಪ ಪೂಜಾರಿ, ಚಂದ್ರಹಾಸ ಕೌಡೂರು ಇದ್ದರು.
ಈ ಕಾರ್ಯಕ್ರಮದ ಬಳಿಕ ನಡೆದ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಇದುವರೆಗಿನ ಕಾಮಗಾರಿಗಳ ಕರ್ಚುವೆಚ್ಚ, ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಆರ್ಥಿಕ ಸ್ಥಿತಿಗತಿ ಬಗ್ಗೆ ಜೀರ್ಣೋದ್ಧಾರ ಸಮಿತಿಯ ಸದಸ್ಯ ಪುರುಷೋತ್ತಮ ಮಲ್ಲಿ ವರದಿ ಮಂಡಿಸಿದರು.
ಜೀರ್ಣೋದ್ಧಾರ ಕೆಲಸಕ್ಕೆ ನಿಧಿ ಸಂಗ್ರಹಣೆ ವಿಷಯದಲ್ಲಿ ಪುಣೆ ಇಂಬೋಸಿಸ್ ಕಾನೂನು ಶಿಕ್ಷಣ ಸಂಸ್ಥೆಯ ಡೀನ್ ಡಾ. ಶಶಿಕಲಾ ಶೆಟ್ಟಿ ಗುರುಪುರ ಮಾತನಾಡುತ್ತ, ಗುತ್ತಿನವರು ಈ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು. ವೈದ್ಯನಾಥ ದೈವಸ್ಥಾನಕ್ಕೆ ಸೇರಿದ ಕೆಲವು ಭೂಮಿ ಈ ಹಿಂದೆ ಮಾರಾಟವಾಗಿದ್ದು, ಅಂತಹವರು ಈ ಜಾಗದ ಋಣ ಸಂದಾಯ ಮಾಡಲು ಇದು ಸಕಾಲ. ಈ ಮಹತ್ಕಾರ್ಯದಲ್ಲಿ ಊರಿನ ಭಕ್ತಜನರ ದೇಣಿಗೆಯೂ ಬಹುಮುಖ್ಯವಾಗಿದೆ ಎಂದರು.
ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ, ಕಾರಮೊಗರಿನ ಡಾ. ರವಿರಾಜ ಶೆಟ್ಟಿ ನಿಧಿ ಸಂಗ್ರಹಕ್ಕೆ ಕೆಲವು ತಂಡ ರಚಿಸುವಂತೆ ಸಲಹೆ ನೀಡಿದರು. “ಎಲ್ಲರೂ ಒಗ್ಗಟ್ಟಿನಿಂದ ಈ ಕೆಲಸಕ್ಕೆ ಇಳಿದಿದ್ದೇವೆ. ಈ ಉತ್ಸಾಹ ಕೊನೆತನಕವೂ ಇರಬೇಕು. ಒಗ್ಗಟ್ಟಿದ್ದರೆ ದೈವ ಬಲವಿರುತ್ತದೆ” ಎಂದು ಕತಾರ್ ಉದ್ಯಮಿ ದೋಣಿಂಜೆಗುತ್ತಿನ ರವಿ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗುತ್ತಿನವರು, ಸೇವಾ ಮನೆತನದವರು ಹಾಗೂ ಊರ ಹತ್ತು ಸಮಸ್ತರು ಇದ್ದರು.
