ಕೈಕಂಬ : ಇಲ್ಲಿನ ಶ್ರೀ ಮುಂಡಿತ್ತಾಯ(ವೈದ್ಯನಾಥ) ಮತ್ತು ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಎಪ್ರಿಲ್ 11ರಂದು ಬೆಳಿಗ್ಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶಿಲಾನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸಲಹೆ-ಸೂಚನೆ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದೈವಸ್ಥಾನದ ಮೊಕ್ತೇಸರ ಗಡಿಕಾರ ಪ್ರಮೋದ ಕುಮಾರ್ ರೈ, ಇಂತಹದೊಂದು ದೈವೀ ಕಾರ್ಯಕ್ಕೆ ಕಾಲ ಕೂಡಿಬರಬೇಕು ಹಾಗೂ ಯೋಗವೂ ಇರಬೇಕು. ಅದೀಗ ಕೂಡಿಬಂದಿದ್ದು, ಈ ಪುರಾತನ ಹಾಗೂ ಕಾರಣಿಕದ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಊರ-ಪರವೂರ ಭಕ್ತರು ಕೈಜೋಡಿಸಬೇಕು ಮತ್ತು ಎಲ್ಲರೂ ಸಮಾನ ಮನಸ್ಸಿನಿಂದ ಕೆಲಸ ಮಾಡಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಪುಣೆ ಇಂಬೋಸಿಸ್ ಕಾನೂನು ವಿಶ್ವವಿದ್ಯಾನಿಲಯದ ಡೀನ್ ಡಾ. ಶಶಿಕಲಾ ಶೆಟ್ಟಿ ಗುರುಪುರ ಇವರು ಮೂಳೂರು ಮುಂಡಿತ್ತಾಯ ದೈವಸ್ಥಾನ ಒಂದು ಕ್ಷೇತ್ರವಾಗಿ ಬೆಳಗಬೇಕು. ಆಗ ಮಾತ್ರ ಪ್ರಕೃತಿದತ್ತವಾದ ಇಲ್ಲಿನ ಸೊಬಗು ಉಳಿದು ಮುಂದಿನ ಪೀಳಿಗೆ ಅದನ್ನು ಭಕ್ತಿಪೂರ್ವಕವಾಗಿ ಅನುಭವಿಸುವಂತಾಗಲಿದೆ. ದೈವದ ಈ ಮಹತ್ಕಾರ್ಯದಲ್ಲಿ ಬಡವ-ಬಲ್ಲಿದರು, ಗುತ್ತಿನವರು, ಗತ್ತಿನವರೆಂಬ ತಾರತಮ್ಯವಿಲ್ಲದೆ ಸಹಕರಿಸಬೇಕು. ಆಗ ದೈವ ಎಲ್ಲರ ಕೈ ಹಿಡಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡುತ್ತ, ಜಿಲ್ಲೆಯ ಬಹುತೇಕ ಎಲ್ಲ ಹಳೆಯ ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರಗೊಂಡರೂ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಒಂದಷ್ಟು ವಿಳಂಬವಾಗಿದೆ. ಆದರೆ ಇಲ್ಲಿ ಸೇರಿರುವ ಭಕ್ತರ ಉತ್ಸಾಹ ಮತ್ತು ಸಹಕಾರ ಕಂಡಾಗ, ಇದು ಅವಧಿಗೂ ಮುಂಚಿತವಾಗಿಯೇ ಜೀರ್ಣೋದ್ಧಾರಗೊಳ್ಳುವ ಬಗ್ಗೆ ನಿರೀಕ್ಷಿಸಬಹುದು. ಒಂದು ಉತ್ತಮ ಕಾರ್ಯಕ್ಕೆ ಧೈರ್ಯ ತೋರಿಸಿದರೆ, ದೈವೀ ಕೃಪೆ ಇದ್ದೇ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ದೈವಸ್ಥಾನದ ತಂತ್ರಿ ಜಿ. ಟಿ. ಅಣ್ಣು ಭಟ್, ಉದ್ಯಮಿ ಅಣ್ಣಪ್ಪ ಪ್ರಭು, ದಾಮೋದರ ನಿಸರ್ಗ, ಡಾ. ರವಿರಾಜ ಶೆಟ್ಟಿ, ಸುಧಾಕರ ಶೆಟ್ಟಿ, ಸುಕುಮಾರ್ ಶೆಟ್ಟಿ, ದೈವಗಳ ಪಾತ್ರಿಗಳಾದ ಚಂದ್ರಹಾಸ ಕೌಡೂರು, ತನಿಯಪ್ಪ ಪೂಜಾರಿ ಮತ್ತು ಗುತ್ತಿನವರು ಹಾಗೂ ಊರಿನ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕಾರಮೊಗರುಗುತ್ತು ಕಿಟ್ಟಣ್ಣ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
