ಮಂಗಳೂರು: ದೈವದೇವಾಲಯಗಳ ತವರು ಎಂದೇ ಪ್ರಸಿದ್ಧಿ ಪಡೆದಿರುವ ತುಳುನಾಡಿನಲ್ಲಿ ಈಗ ನೇಮೋತ್ಸವ, ಜಾತ್ರೋತ್ಸವಗಳದ್ದೇ ಕಾರುಬಾರು. ಕರಾವಳಿಯುದ್ದಕ್ಕೂ ಇರುವ ದೈವ-ದೇವಾಲಯಗಳಲ್ಲಿ ಈಗ ಜಾತ್ರಾಮಹೋತ್ಸವದ ಸಂಭ್ರಮ ಮನೆಮಾಡಿದೆ. ಅದೇರೀತಿ ಅಡ್ಯಾರುಪದವಿನ ಶ್ರೀ ದೈವರಾಜ ಕೋರ್ದಬ್ಬು ಪಂಜುರ್ಲಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಡೆಯಿತು.
ಎ.7ರಂದು ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ ಆರಂಭಗೊಂಡಿತು. ನವಕಲಶ, ಮಹಾಗಣಪತಿ ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ವರ್ಷಾವಧಿ ಉತ್ಸವಕ್ಕೆ ಚಾಲನೆ ದೊರೆಯಿತು. ಬಳಿಕ ಭಂಡಾರ ಏರಿ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ ಸಂಪನ್ನಗೊಂಡಿತು. ಎ.8ರಂದು ರಾತ್ರಿ ಪಂಜುರ್ಲಿ ಗುಳಿಗ ನೇಮೋತ್ಸವ ಸಂಪನ್ನಗೊಂಡಿತು. ಬಳಿಕ ರಾಹುಗುಳಿಗ ನೇಮೋತ್ಸವ ಜರಗಿತು.
1979ರಲ್ಲಿ ಸ್ಥಾಪನೆಗೊಂಡಿರುವ ಅಡ್ಯಾರುಪದವಿನ ಶ್ರೀ ದೈವರಾಜ ಕೋರ್ದಬ್ಬು ಪಂಜುರ್ಲಿ ದೈವಸ್ಥಾನವು ತನ್ನ ವಿಶೇಷ ಕಾರಣಿಕ ಶಕ್ತಿಯ ಮೂಲಕ ಪ್ರಸಿದ್ಧಿ ಪಡೆದಿದೆ. ಭಕ್ತಾದಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವೇದಿಸಿಕೊಂಡು ಎರಡು ದಿನಗಳ ಕಾಲ ನಡೆದ್ ವರ್ಷಾವಧಿ ಉತ್ಸವದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಕೃತಾರ್ಥರಾದರು.



