
ಕುಪ್ಪೆಪದವು: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಅಚಾರಿ ಜೋರ, ದೊಡ್ಡಳಿಕೆ ಹಾಗೂ ಎರ್ಮಾಳು ಪ್ರದೇಶದ ನಾಗರಿಕರು ಖಾಲಿ ಕೊಡ ಹಿಡಿದು ಇಲ್ಲಿನ ಕುಪ್ಪೆಪದವು ಗ್ರಾ.ಪಂ. ಎದುರು ಸೋಮವಾರ ಧರಣಿ ನಡೆಸಿದರು.
ಈ ವೇಳೆ ಧರಣಿ ನಿರತರರು ಮಾತನಾಡಿ, ಈ ಹಿಂದೆ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದ್ದರಿಂದ ತಮ್ಮ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಆದರೆ ಇದೀಗ ಎಂಟು ದಿನಗಳಿಂದ ನೀರಿಗಾಗಿ ಹಾಹಾಕಾರ ಎದ್ದಿದ್ದು, ಮತ್ತೆ ಅತಂತ್ರ ಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಇತ್ತೀಚೆಗೆ ಅಚಾರಿ ಜೋರ ಪ್ರದೇಶದಲ್ಲಿ ಎರಡು ಕೊಳವೆ ಬಾವಿಗಳನ್ನು ತೋಡಿದ್ದು, ಅಂತರ್ಜಲ ಮಟ್ಟ ಕುಸಿದಿದ್ದರಿಂದ ಸಕಾಲಕ್ಕೆ ನೀರು ಲಭ್ಯವಾಗುತ್ತಿಲ್ಲ. ಇನ್ನೊಂದು ಕಡೆ ನೀರಿನ ಟ್ಯಾಂಕರ್ ಹೋಗಲಾಗದೆ ನೀರು ಸಮರ್ಪಕವಾಗಿ ಗ್ರಾಮಸ್ಥರಿಗೆ ದೊರಕುತ್ತಿಲ್ಲ ಎಂದು ತಿಳಿಸಿದರು.
ಇದರಿಂದ ಎಚ್ಚೆತ್ತ ಅಧ್ಯಕ್ಷ ಹಾಗೂ ತಾ.ಪಂ. ಸದಸ್ಯರು ಪಿಡಿಒ ಅಧಿಕಾರಿಯೊಂದಿಗೆ ಅಚಾರಿ ಜೋರಕ್ಕೆ ತೆರಲಿ ಪರಿಶೀಲನೆ ನಡೆಸಿ ಟ್ಯಾಂಕರ್ ಮೂಲಕ ಅಲ್ಲಿನ ಓವರ್ ಹೆಡ್ ಗೆ ನೀರು ತುಂಬಿಸುವಂತೆ ಮಾಡಿ ನೀರು ಸರಬರಾಜು ಮುಂದಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಧರಣಿ ನಿರತರರು ತಾತ್ಕಾಲಿಕ ಪರಿಹಾರ ನಮಗೆ ಬೇಡ. ಹೊಸದಾಗಿ ಕೊರೆದಿರುವ ಬಾವಿಗೆ ಪೈಪ್ ಅಳವಡಿಸಬೇಕು ಹಾಗೂ ಹಳೆ ಬಾವಿಯಲ್ಲಿರುವ ಕೆಸರನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾಗಬೇಕು ಇಲ್ಲದಿದ್ದಲ್ಲಿ ಧರಣಿ ಮುಂದುವರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಧರಣಿಯ ನೇತೃತ್ವವನ್ನು ಜಗದೀಶ್, ನಿತೇಶ್, ವಿಶ್ವವಾಥ್ ಹಾಗೂ ಆನಂದ ಪೂಜಾರಿ ಮತ್ತಿತರರು ವಹಿಸಿದ್ದರು.

