ಕೈಕಂಬ: ಹಕ್ಕುಪತ್ರ ನೀಡಿಕೆ ವಿಳಂಬ ವಿರೋಧಿಸಿ ಫೆ. 15ರಂದು ಗುರುಪುರ ಕೈಕಂಬದ ನಾಡ ಕಚೇರಿ ಎದುರು ಕುಪ್ಪೆಪದವು ಎಸ್‍ಸಿ/ಎಸ್‍ಟಿ ಕಾಲೊನಿ ಹಾಗೂ ಇತರ ಫಲಾನುಭವಿ ಮಹಿಳೆಯರು ಘೆರಾವ್ ನಡೆಸಿ, ತಕ್ಷಣ ಹಕ್ಕುಪತ್ರ ವಿಲೇವಾರಿ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಮಹಿಳೆಯರು ಶಾಸಕ ಹಾಗೂ ಕಂದಾವರ ಪಂಚಾಯತ್ ಅಧ್ಯಕ್ಷೆ ವಿರುದ್ಧ ಛೀಮಾರಿ ಹಾಕಿದರು.15-pra 5

ಸಚಿವ ಕಾಗೋಡು ತಿಮ್ಮಪ್ಪರು ಹಕ್ಕುಪತ್ರ ನೀಡಲಿದ್ದಾರೆಂದು ಪ್ರಕಟಿಸಿ, ಫೆ. 14ರಂದು ಗುರುಪುರ ಕೈಕಂಬದ ಗಣೇಶ ಕಟ್ಟೆಯಲ್ಲಿ ಆಯೋಜಿಸಲಾದ ಸಮಾರಂಭಕ್ಕೆ ಫಲಾನುಭವಿಗಳಿಗೆ ಆಹ್ವಾನಿಸಲಾಗಿತ್ತು. ಆ ಪ್ರಕಾರ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳು ಸಂಜೆ 3 ಗಂಟೆಗೆ ಕೈಕಂಬದಲ್ಲಿ ಹಾಜರಿದ್ದರು. ಆದರೆ ಸಚಿವ ಹಾಗೂ ಶಾಸಕ ಮೊೈದಿನ್ ಬಾವರು ರಾತ್ರಿ 8.30ವರೆಗೆ ಭಾಷಣ ಮುಂದುವರಿಸಿದ್ದರಿಂದ, ನಂತರದಲ್ಲಿ ಬೆರಳೆಣಿಕೆ ಮಂದಿಗೆ ಮಾತ್ರ ಹಕ್ಕುಪತ್ರ ಹಂಚಲಾಯಿತು. ಅದಾಗಲೇ,ರಾತ್ರಿಯಾಗಿದ್ದು, ಕಾದು ಸುಸ್ತಾದ ಮಂದಿ ರಾಜಕಾರಣಿಗಳ ವಿರುದ್ಧ ಹಿಡಿಶಾಪ ಹಾಕಿದರು. ಅತ್ತ, ಸುರತ್ಕಲ್‍ನಲ್ಲಿ ಆಯೋಜಿಸಲಾಗಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವೂ ಫಲಾನುಭವಿಗಳಲ್ಲಿ ನಿರಾಸೆಗೆ ಕಾರಣವಾಗಿತ್ತು.15vp ka pra 1

ತಕ್ಷಣ ಪ್ರತಿಕ್ರಿಯಿಸಿದ ಬಾವ ಫೆ. 15ರಂದು ನಾಡಕಚೇರಿಯಲ್ಲಿ ಹಕ್ಕುಪತ್ರ ವಿತರಿಸಲಾಗುವುದೆಂದು ಭರವಸೆ ನೀಡಿ, ಅಲ್ಲಿಗೆ ಬರುವಂತೆ ಸೂಚಿಸಿದರು. ಆದರೆ ಇಂದು ನಾಡಕಚೇರಿಗೆ ಬಂದರೆ, ಅಲ್ಲಿ ಮತ್ತೆ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಸುಮಾರು 150 ಮಂದಿ ಮಹಿಳೆಯರು ಹಕ್ಕುಪತ್ರ ಪಡೆಯಲು ಆಗಮಿಸಿದ್ದು, ಸಿಬ್ಬಂದಿಯು ಇನ್ನೇನು ಹಕ್ಕುಪತ್ರ ನೀಡುವಷ್ಟರಲ್ಲಿ, ತಾನೇ ಬಂದು ಹಕ್ಕುಪತ್ರ ನೀಡುವೆ ಎಂದು ಬಾವರು ಉಪ-ತಹಶೀಲ್ದಾರ್ ಶಿವಕುಮಾರಗೆ ಆದೇಶಿಸಿದರು.15vp ka prathibatane1

ಕಳೆದ ಐದಾರು ತಿಂಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡಿ ಸುಸ್ತಾಗಿರುವ ಮಹಿಳೆಯರು ಈ ಮಾತು ಕೇಳಿ ರೊಚ್ಚಿಗೆದ್ದು, ನಾಡಕಚೇರಿಗೆ ಘೆರಾವ್ ಹಾಕಿ, ಶಾಸಕರ ಆಗಮನಕ್ಕೆ ಪಟ್ಟುಹಿಡಿದರು. ಮಹಿಳೆಯರ ಪ್ರತಿಭಟನೆ ಕಾವೇರುತ್ತಿದ್ದಂತೆ ನಾಡಕಚೇರಿಗೆ ಬಜಪೆ ಪೊಲೀಸರು ಧಾವಿಸಿ, ಭದ್ರತೆ ಒದಗಿಸಿದರು.

ಜೆಡಿಎಸ್, ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖಂಡರು ಹಾಜರಿದ್ದು, ಸ್ಥಳೀಯ ಜನಪ್ರತಿನಿಧಿಗಳ `ಚಿಲ್ಲರೆ ರಾಜಕೀಯ’ದ ವಿರುದ್ಧ ಟೀಕೆ ವ್ಯಕ್ತಪಡಿಸಿದರು. “ಹಕ್ಕುಪತ್ರ ನೀಡಲು ಕಾಂಗ್ರೆಸ್ ಆಡಳಿತ ಈಗಾಗಲೇ ಸಾಕಷ್ಟು ವಿಳಂಬ ಮಾಡಿದೆ. ಇಂದು ಶಾಸಕರು ಬರುವವರೆಗೆ ಪ್ರತಿಭಟನೆ ನಡೆಸಿ, ನಮ್ಮ ಹಕ್ಕು ಪಡೆದುಕೊಳ್ಳಲಿದ್ದೇವೆ. ಇದಕ್ಕೆ ಯಾವುದೇ ಪಕ್ಷಗಳ ಒಳ ರಾಜಕೀಯ, ತಂತ್ರ-ಕುತಂತ್ರ ಬೇಡ” ಎಂದು ಸಿಐಟಿ ಮುಖಂಡ ಸದಾಶಿವದಾಸ್ ಹೇಳಿದರು. ಈ ಸಂದರ್ಭದಲ್ಲಿ ಕುಪ್ಪೆಪದವು ಗ್ರಾಪಂ ಉಪಾಧ್ಯಕ್ಷ ಡಿ ಪಿ ಹಮ್ಮಬ್ಬ, ಬಿಜೆಪಿ ಮುಖಂಡರಾದ ದೋಗು ಪೂಜಾರಿ, ಶಿವಪ್ಪ ಬಂಗೇರರು,ಕುಪ್ಪೆಪದವು ಗ್ರಾಪಂ ಸದಸ್ಯೆ ವಸಂತಿ ಪ್ರತಿಭಟನಕಾರರ ಪರವಾಗಿ ಮಾತನಾಡಿದರು.

12 ಗಂಟೆಗೆ ನಾಡ ಕಚೇರಿಗೆ ಬರುವುದಾಗಿ ಶಾಸಕ ಬಾವ ಹೇಳಿದರೂ ಒಂದು ಗಂಟೆಯವರೆಗೆ ಆಗಮಿಸಿಲ್ಲ. ಈ ಮಧ್ಯೆ, ಇಷ್ಟೊತ್ತು ಕಾದವರಿಗೆ ಇನ್ನೊಂದಷ್ಟು ಹೊತ್ತು ಕಾಯಲು ಸಾಧ್ಯವಿಲ್ಲವೇ ಎಂದು ಸಮಜಾಯಿಷಿ ನೀಡಲು ಮುಂದಾದ ಕಂದಾವರ ಗ್ರಾಪಂ ಅಧ್ಯಕ್ಷೆಯನ್ನು ಕುಪ್ಪೆಪದವಿನ ಮಹಿಳೆಯರು ತರಾಟೆಗೆ ತೆಗೆದುಕೊಂಡರು.

By Suddi9

Leave a Reply

Your email address will not be published. Required fields are marked *