ಮಂಗಳೂರು: ವಾಟ್ಸಾಪ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕದಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ.ಕ. ಜಿಲ್ಲೆಯ ಶೇ.99 ಮಂದಿ ಶಾಂತಿ ಬಯಸುತ್ತಿದ್ದು, ಶೇ.1 ರಷ್ಟು ಮಂದಿ ಶಾಂತಿ ಕದಡುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುವ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಘಟನೆಗಳಿಗೆ ಮತೀಯ ಬಣ್ಣ ಹಚ್ಚಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತೀಯ ಶಕ್ತಿಗಳಿಗೆ ದೊಂಬಿ ಎಬ್ಬಿಸಲು ಇಲ್ಲಿ ಅವಕಾಶ ನೀಡದಿದ್ದರು, ಇಲ್ಲಿನ ಕೆಲ ಮಾಧ್ಯಮಗಳು ಇದಕ್ಕೆ ವಿಪರೀತ ಪ್ರಚಾರ ನೀಡುತ್ತಿವೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಇಳಿಮುಖವಾಗಿದೆ ಎಂದು ತಿಳಿಸಿದರು.

