ಕೈಕಂಬ: “ಡಾಕ್ಟರ್, ಇಂಜಿನಿಯರ್ ಮಾಡಲೆಂದು ಪಾಲಕರು ತಮ್ಮ ಮಕ್ಕಳ ಅಂಕದ ಮೇಲೆ ಚಿಂತಿತರಾಗಿ ಒತ್ತಡ ಹೇರುತ್ತಾರೆ. ಆದರೆ ಕ್ರೀಡೆ ಮಕ್ಕಳ ದೈಹಿಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿದೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಲು ಪಾಲಕರು ಉತ್ತೇಜನ ನೀಡಬೇಕು” ಎಂದು ಪ್ರಗತಿಪರ ಕೃಷಿಕ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು.

ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗ ಬಂಟ ಸಮುದಾಯದವರಿಗೆ ಗಂಜಿಮಠದ ರಾಜ್ ಅಕಾಡೆಮಿ ಶಾಲಾ ಮೈದಾನದಲ್ಲಿ ನ. 5ರಂದು ಆಯೋಜಿಸಿದ `ಬಂಟರ ಕ್ರೀಡಾಕೂಟ’ ಉದ್ಘಾಟಿಸಿ ನಾಯ್ಕ್ ಮಾತನಾಡಿದರು. ಬಂಟರ ಸಂಘಗಳಿಂದ ಸಮಾಜ ಬಂಧುಗಳನ್ನು ಒಂದೆಡೆ ಸೇರಿಸುವ ಉತ್ತಮ ಕೆಲಸಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕ್ರೀಡೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾವುದೇ ಕೆಲಸ ಶ್ರಮಪಟ್ಟು ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ದೀಪ ಬೆಳಗಿಸಿದ ರಾಜ್ ಅಕಾಡೆಮಿ ಸಂಚಾಲಕಿ ಮಮತಾ ಯತಿರಾಜ್ ಶೆಟ್ಟಿ ಅಭಿಪ್ರಾಯಪಟ್ಟರು.

ಹಿಂದಿನ ಮಕ್ಕಳಂತೆ ಈಗಿನ ಮಕ್ಕಳು ವಯಸ್ಸಿಗೆ ತಕ್ಕಂತೆ ಆಟೋಟಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ಆಪ್ಯಾಯಮಾನವಾಗಿದೆ. ಆದರೆ ಬಂಟರ ಸಂಘಗಳು ಈ ಮಾತಿಗೆ ಅಪವಾದವಾಗಿವೆ. ಇಂತಹ ಕ್ರೀಡಾಕೂಟಗಳು ನಮ್ಮ ಸಮಾಜದ ಒಗ್ಗಟ್ಟು ಪ್ರಕಟಿಸುವಂತಿರಬೇಕು ಎಂದು ಮುಖ್ಯ ಅತಿಥಿ, ಕೆನರಾ ಹೈಸ್ಕೂಲ್ ಮಂಗಳೂರಿನ ದೈಹಿಕ ಶಿಕ್ಷಕ ದಯಾನಂದ ಮಾಡ ಹೇಳಿದರು. ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಕ ಪ್ರೇಮನಾಥ ಶೆಟ್ಟಿ ಸಂದರ್ಭೋಚಿತ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ, “ಸಮಾಜದ ಏಕತೆಗಾಗಿ ಈ ಕ್ರೀಡಾಕೂಟ ಬಳಸಿಕೊಳ್ಳಬೇಕು. ಇದು ಸ್ಪರ್ಧೆ ಅಲ್ಲ, ಒಂದು ಕೂಟವಾಗಿದೆ. ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳ ಬಂಟರ ಪರಿಚಯವಾಗಬೇಕೆಂಬ ಉದ್ದೇಶ ಈ ಕ್ರೀಡಾಕೂಟದಲ್ಲಿದೆ” ಎಂದರು.
ವೇದಿಕೆಯಲ್ಲಿ ಸದಾಶಿವ ಕೆ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ನಂದರಾಜ, ದಶರಥ ಶೆಟ್ಟಿ, ಶಶಿಧರ ಶೆಟ್ಟಿ, ಸುನಿತಾ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಮಿಥುನ್ ರೈ, ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ, ಪೃಥ್ವೀ ಆಳ್ವ, ಸಚಿನ್ ಅಡಪ ಮೊದಲಾದವರಿದ್ದರು. ಸಂಘದ ಯುವ ವಿಭಾಗದ ಅಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಸಲ್ಲಾಜೆ ನಿರೂಪಿಸಿದರು. ಸಂಘದ ಸಂಚಾಲಕ ಸುದರ್ಶನ ಶೆಟ್ಟಿ ಪೆಮರ್ಂಕಿ, ಪುರುಷೋತ್ತಮ ಮಲ್ಲಿ ಹಾಗೂ ಇತರ ಪದಾಧಿಕಾರಿಗಳು ಜೊತೆಯಲ್ಲಿದ್ದರು. ಸಂಘದ ವ್ಯಾಪ್ತಿಯಲ್ಲಿ ಪಚ್ಚನಾಡಿ, ಮೂಡುಶೆಡ್ಡೆ, ತಿರುವೈಲು, ಬೊಂಡಂತಿಲ, ಉಳಾಯಿಬೆಟ್ಟು, ಗುರುಪುರ, ಅಡ್ಡೂರು, ತೆಂಕುಳಿಪಾಡಿ, ಬಡಗುಳಿಪಾಡಿ ಮತ್ತು ಮೊಗರು ಗ್ರಾಮ ಒಳಗೊಂಡಿದೆ.

