ಮಂಗಳೂರು: ನಗರದ ಬೋಳೂರಿನಲ್ಲಿರುವ ಸನಾತನ ಆಶ್ರಮದಲ್ಲಿ ನಡೆಯುತ್ತಿರುವ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಎರಡನೇ ದಿನ ಉಪಸ್ಥಿತ ಧರ್ಮಪ್ರೇಮಿ ಹಿಂದೂ ಸಂಘಟಕರಿಗೆ ಸನಾತನ ಸಂಸ್ಥೆಯ ಸೌ.ಶೋಭಾ ಕಾಮತ್ ಇವರು, ಹಿಂದೂರಾಷ್ಟ್ರ ಸ್ಥಾಪನೆಗಾಗಿ ಭಗವಂತನಲ್ಲಿ ಭಕ್ತಿ ಶ್ರದ್ಧೆಯಿಂದ ಪ್ರಾರ್ಥನೆ ಮಾಡುವುದರ ಮಹತ್ವ, ದೇವರಿಗೆ ಬೆಳಿಗ್ಗೆ ಎದ್ದ ಕೂಡಲೇ ಹಾಗೆಯೇ ದಿನನಿತ್ಯದ ಕರ್ಮಗಳನ್ನು ಮಾಡುವಾಗ ಹೇಗೆ ಪ್ರಾರ್ಥನೆ ಮಾಡಬೇಕು ಎಂಬುದರ ಕುರಿತಾಗಿ ಉದಾಹರಣೆ ಸಹಿತ ಮಾಹಿತಿ ನೀಡಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ, ವಕ್ತಾರರಾದ ಶ್ರೀ ಮೋಹನ ಗೌಡ ಧರ್ಮಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಹಿಂದೂರಾಷ್ಟ್ರ ಸ್ಥಾಪನೆಗಾಗಿ ಶಾರೀರಿಕ, ಮಾನಸಿಕ, ಬಲದ ಜೊತೆಗೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಜಾತ್ಯಾತೀತತೆ ಹೆಸರಿನಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ. ಜಾತಿಪದ್ಧತಿಯು ಹಿಂದೂಗಳ ಮೇಲೆ ಕಂಠಕಪ್ರಾಯವಾಗಿ ಪರಿಣಮಿಸಿದೆ. ಛತ್ರಪತಿ ಶಿವಾಜಿ ಮಹಾರಾಜರಂತಹ ಹಿಂದೂರಾಷ್ಟ್ರವಾದಿಗಳ ವಿಚಾರಗಳು ಸಮಾಜಕ್ಕೆ ಅರಿವಾಗಬಾರದೆಂದು ಸರಕಾರವು ಇತಿಹಾಸದ ವಿಕೃತೀಕರಣ ಮಾಡಿ ಅವರ ವಿಚಾರಗಳನ್ನು ನಾಶ ಮಾಡಿದೆ.

ಒಟ್ಟಾರೆಯಾಗಿ ಇಂದು ಪ್ರಜಾಪ್ರಭುತ್ವ ಸಂಪೂರ್ಣ ವಿಫಲವಾಗಿದೆ, ದೇಶದ ಜನತೆಗೆ ಸಿಗಬೇಕಾದಂತಹ ಸೌಲಭ್ಯ, ರಕ್ಷಣೆ ದೊರಕುತ್ತಿಲ್ಲ, ಆದ್ದರಿಂದ ‘ಸರ್ವೇ ಜನ ಸುಖಿನೋ ಭವಂತು’ ಎಂಬಂತೆ ಇಡೀ ಸಮಾಜದ ಜನರ ಕ್ಷೇಮವನ್ನು ನೋಡುವ ಶ್ರೇಷ್ಟವಾದ ರಾಮರಾಜ್ಯ ಅಂದರೆ ಹಿಂದೂರಾಷ್ಟ್ರದ ಸ್ಥಾಪನೆ ಮಾಡುವ ಅನಿವಾರ್ಯತೆ ಇದೆ.
ಧರ್ಮಪ್ರಸಾರ ಸೇವಕರಾದ ಶ್ರೀ ರಮಾನಂದ ಗೌಡ ಹಾಗೂ ಶ್ರೀ ಕಾಶೀನಾಥ ಪ್ರಭು ಧರ್ಮಪ್ರೇಮಿಗಳಿಗೆ ಸ್ವಭಾವದೋಷ ಅಂದರೆ ದುರ್ಗಣಗಳನ್ನು, ಕೆಟ್ಟ ಸಂಸ್ಕಾರಗಳನ್ನು ಹಾಗೆಯೇ ಅಹಂ ನಿರ್ಮೂಲನೆ ಮಾಡಿ ಪರಿಣಾಮಕಾರಿ ಹಿಂದೂ ಸಂಘಟನೆಯನ್ನು ಹೇಗೆ ಮಾಡುವುದು, ಧರ್ಮಪ್ರಸಾರದ ಸೇವೆ ಮಾಡುವಾಗ ಕೆಟ್ಟಶಕ್ತಿಗಳ ತೊಂದರೆಗಳು ಆಗುತ್ತವೆ, ಇವುಗಳನ್ನು ಆಧ್ಯಾತ್ಮಿಕ ಉಪಾಯದಿಂದ ಹೇಗೆ ಸಮರ್ಥವಾಗಿ ಎದುರಿಸುವುದು ಎಂಬುದರ ಕುರಿತಾಗಿ ಮಾರ್ಗದರ್ಶನ ಮಾಡಿದರು.
ಧರ್ಮಪ್ರೇಮಿಗಳು ದ.ಕ ಜಿಲ್ಲೆಯಾದ್ಯಂತ ಮುಂದೆ ಹಿಂದೂಜಾಗೃತಿಯನ್ನು ವ್ಯಾಪಕವಾಗಿ ಮಾಡುವ ಕುರಿತಾಗಿ ನಿರ್ಣಯ ಮಾಡಿದರು.
ಹಿಂದೂ ಸಂಘಟಕ ಕಾರ್ಯಶಾಲೆ ಉದ್ದೇಶಿಸಿ ಮಾತನಾಡುತ್ತಿರುವ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ, ವಕ್ತಾರರಾದ ಶ್ರೀ ಮೋಹನ ಗೌಡ.
