ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರದಂತೆ ರಾಜಕೀಯ ಮುಖಂಡರು ಪರಸ್ಪರ ಸವಾಲು ಹಾಕಿಕೊಳ್ಳಲು ದಲಿತರನ್ನು ಮುಂದಿಟ್ಟಿಕೊಂಡು ಕಚ್ಚಾಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಮಹಾ ಸಭಾದ ದ.ಕ. ಜಿಲ್ಲಾಧ್ಯಕ್ಷ ರಾಜ ಪಲ್ಲಮಜಲು ಆಗ್ರಹಿಸಿದ್ದಾರೆ.ಸೋಮವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖುಮಂತ್ರಿಯವರು ಇತ್ತಿಚೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ದಲಿತರ ಮನೆಗೆ ಹೋಗಿ ಊಟ ಮಾಡಿದರೆ ಸಾಲದು ಹೆಣ್ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಬಾಳು ಕೊಡ ಬೇಕೆಂದು ಲೇವಡಿ ಮಾಡಿದ್ದರು. ಇದಾದ ಬಳಿಕ ಸಂಸದೆ ಶೋಭಾ ಕರಂದ್ಲಾಜೆಯವರು ಮಾಜಿ ಸಚಿವ ದಿನೇಶ್ ಗುಂಡುರಾವ್ ಅವರಿಗೆ ನೀವು ಅವರನ್ನು ಮದುವೆಯಾಗ ಬಹುದಲ್ಲವೆ? ಎಂದು ತಿರುಗೇಟು ನೀಡಿದ್ದರು. ಇದಕ್ಕೆ ದಿನೆಶ್ ಗುಂಡುರಾವ್ ಅವರು ನಾನು ಈಗಾಗಲೇ ಮುಸ್ಲಿಂ ಹೆಣ್ಣು ಮಗಳಿಗೆ ಬಾಳುಕೊಟ್ಟಿದ್ದೇನೆ. ನಿಮಗೆ ಇನ್ನೂ ಅವಕಾಶ ಇದೆ ಎಂದು ಹೇಳುವ ಮೂಲಕ ಬಾಯ್ಮುಚ್ಚಿದ್ದರು ಎಂದು ತಿಳಿಸಿದರು.
ಸಂವಿಧಾನದಲ್ಲಿ ಯಾರು ಯಾರನ್ನೂ ಬೇಕಾದರೂ ಮದುವೆಯಾಗಲು ಅವಕಾಶವಿದ್ದು ದಲಿತ ಸಮಾಜವನ್ನು ಗುರಿಯಾಗಿಸಿ ರಾಜಕಾರಣಿಗಳು ಪರಸ್ಪರ ಕಚ್ಚಾಡುವುದು ಸರಿಯಲ್ಲ, ಅವರಿಗೆ ಸಂವಿಧಾನ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿರುವ ಅವರು ದೇಶದ ಮೂಲ ನಿವಾಸಿಗಳಾದ ದಲಿತ ಸಮಾಜ ಪ್ರತೀ ಕ್ಷೇತ್ರದಲ್ಲೂ ಗಣನೀಯವಾದ ಪಾತ್ರ ವಹಿಸಿದೆ ಎಂದರು. ರಾಜಕಾರಣಿಗಳು ಈ ರೀತಿ ಕಚ್ಚಾಡುವ ಬದಲು ದಲಿತರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಧ್ವನಿಎತ್ತಬೇಕು, ವಿವಿಧ ಪಕ್ಷಗಳ ಮುಖಂಡರು ದಲಿತರ ಮನೆಯಲ್ಲಿ ಭೋಜನ ಸ್ವೀಕರಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವುದನ್ನು ಕೂಡ ನಿಲ್ಲಿಸಬೇಕು ಎಂದ ಅವರು ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಇರಾದೆ ಇದ್ದು ಪ್ರತ್ಯೇಕತೆ ಬೇಕಾಗಿಲ್ಲ ಎಂದರು.
ದ.ಕ.ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಡಿ.ಸಿ.ಮನ್ನಾ ಜಮೀನನನು ಇನ್ನೂ ಕೂಡ ದಲಿತರಿಗೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ದಲಿತರ ಮೀಸಲು ಜಮೀನನ್ನು ಅತಿಕ್ರಮಣವನ್ನು ತೆರವುಗೊಳಿಸಲು ಜಿಲ್ಲಾಡಳಿತ ಈವರೆಗೂ ಕ್ರಮ ಕೈಗೊಂಡಿಲ್ಲ, ದಲಿತರ ಬಗ್ಗೆ ಅಪಾರ ಕಾಳಜಿಯೆಂದು ಬಿಂಬಿಸುವ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ರಾಜಪಲ್ಲಮಜಲು ಅವರು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ವಿದ್ಯಾವಂತ ದಲಿತರಿದ್ದು ಅವರಿಗ ಸರಕಾರಿ ನೌಕರಿ ಒದಗಿಸುವ ಬಗ್ಗೆ ಸಚಿವರು ಶಿಫಾರಸ್ಸು ಮಾಡಲು ಚಿಂತಿಸಲಿ ಎಂದರು.ದಲಿತರ ಕುಂದುಕೊರತೆ ಸಭೆಯಲ್ಲೂ ಈವರೆಗೆ ಸಚಿವರು, ಶಾಸಕರಾಗಲಿ ಈವರೆಗೆ ಭಾಗವಹಿಸಿ ಸಮಸ್ಯೆಗಳನ್ನು ಆಲಿಸುವಂತ ಪ್ರಯತ್ನವನ್ನು ಮಾಡಿಲ್ಲ, ದಲಿತರಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾಳಜಿ ವಹಿಸಲಿ ಎಂದರು.ಸುದ್ದಿಗೋಷ್ಟಿಯಲ್ಲಿ ಮೋಹನ್ ಬಡಗಬೆಳ್ಳೂರು ಹಾಜರಿದ್ದರು.
