ವಿಟ್ಲ: ಸಮಾಜದಲ್ಲಿ ಬರಹ ಕಲಿಸುವ ಅಧ್ಯಾಪಕರು ಸಾವಿರ ಮಂದಿ ಇರಬಹುದು, ವಿದ್ಯಾರ್ಥಿಗಳಿಗೆ ಬದುಕು ಕಲಿಸುವ ಗುರುಗಳ ಸಂಖ್ಯೆ ಹೆಚ್ಚಿದಂತೆ ಸಮಾಜ ಉತ್ತಮವಾಗಿರುತ್ತದೆ. ಆರ್ಥಿಕತೆ ಅಥವಾ ಘನಸ್ಥಿಕೆಯ ಹಿಂದೆ ಹೋಗದೆ ಎಲ್ಲರ ಜತೆಗೆ ಪ್ರೀತಿಯಿಂದ ಇದ್ದು, ಉತ್ತಮ ವಿದ್ಯಾರ್ಥಿ ಜೀವನ ನಿರ್ಮಾಣದಲ್ಲಿ ತೊಡಗುವುದು ಹೆಮ್ಮೆಯ ವಿಚಾರ. ಗುರುಗಳು ಮಾಡಿದ ಮಾರ್ಗದರ್ಶನ, ತೋರಿಸಿದ ಹಾದಿಯಲ್ಲಿ ನಡೆದಾಗ ಅತ್ಯುತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.ಅವರು ಭಾನುವಾರ ಮುರುವ ಮಾಣಿಲ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಮುಜೂರು ಅನಂತ ಭಟ್ಟ ಸನ್ಮಾನ ಸಮಿತಿ ವತಿಯಿಂದ 34 ವರ್ಷಗಳ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಮುಜೂರು ಅನಂತ ಭಟ್ಟ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

VIL_25 JUNE_3

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ಮಾತನಾಡಿ ವಿದ್ಯಾರ್ಥಿಗಳಲ್ಲಿನ ಪ್ರೀತಿ, ಸೇವೆಯಲ್ಲಿನ ನಿಷ್ಠೆಯ ಫಲವಾಗಿ ಶಿಷ್ಯವೃಂದ ಹಾಗೂ ಊರಿನ ಜನರು ಜತೆಯಾಗಿ ಅಭಿನಂದಿಸಲು ಕಾರಣವಾಯಿತು. ಕುಗ್ರಾಮವಾಗಿದ್ದ ಮಾಣಿಲವನ್ನು ಸುಗ್ರಾಮವಾಗಿಸಿದ, ಸಮಾಜಕ್ಕಾಗಿ ಜೀವನವನ್ನೇ ಪಣಕ್ಕಿಟ್ಟ ವ್ಯಕ್ತಿಯನ್ನು ಗೌರವಿಸುವ ಕಾರ್ಯ ಎಲ್ಲರಿಂದ ನಡೆಯವೇಕಾಗಿದೆ. ಮುಂದಿನ ವರ್ಷ ಇದೇ ಸಮಯದಲ್ಲಿ ಊರಿನವರು ಆ ಕಾರ್ಯಕ್ರಮ ನಡೆಸಲು ತಯಾರಾಗಬೇಕಿದೆ ಎಂದು ತಿಳಿಸಿದರು.ವಿಷ್ಣು ಕನ್ನಡಗುಳಿ ಅಭಿನಂದನ ಭಾಷಣ ಮಾಡಿದರು. ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿಶ್ರಾಂತ ಹಿಂದಿ ಅಧ್ಯಾಪಕ ಪಿ. ಎಸ್. ಕೃಷ್ಣ ಭಟ್ ಸನ್ಮಾನಿಸಿದರು. ಶ್ರೀಯುತ ಮುಜೂರು ಅನಂತ ಭಟ್ಟ ಸನ್ಮಾನ ಸಮಿತಿ ವತಿಯಿಂದ ಶಿಕ್ಷಕ ಮುಜೂರು ಅನಂತ ಭಟ್ಟ ಮತ್ತು ಪುಷ್ಪಲತಾ ದಂಪತಿಗಳನ್ನು 2ಲಕ್ಷದ ನಗದು, ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ವತಿಯಿಂದ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು. ಊರಿನ ಹಾಗೂ ಶಿಷ್ಯರ ವತಿಯಿಂದ ಗೌರಾರ್ಪಣೆ ಮಾಡಲಾಯಿತು.ಶಿಷ್ಯರಾದ ಪದ್ಮನಾಭ ಬಿ., ಗಾಯತ್ರಿ, ಮುರಳೀಧರ ಮಾಣಿಮೂಲೆ, ಪುತ್ರಿ ಅನುಶ್ರೀ, ಶಿಕ್ಷಕಿ ಲತಾ ಅಭಿಪ್ರಾಯ ತಿಳಿಸಿದರು. ದಯಾನಂದ ಕುಕ್ಕಾಜೆ ಹಾಗೂ ಕೆ. ವಿಲ್ಪ್ರೆಡ್ ಡಿಸೋಜ ಅವರು ರಚಿಸಿದ ಸಾಕ್ಷ್ಯ ಚಿತ್ರದ ಪ್ರದರ್ಶನ ನಡೆಯಿತು.ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಮಾಜಿ ಮಂಡಲ ಪ್ರಧಾನರು, ಗ್ರಾಮ ಪಂಚಾಯಿತಿ ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಮುರುವನಡುಮನೆ ಮಹಾಬಲ ಭಟ್ ಮತ್ತಿತರರು ಉಪಸ್ಥಿತರಿದ್ದರು.ಅನನ್ಯ ಬಳಂತಿಮೊಗರು ಪ್ರಾರ್ಥಿಸಿದರು. ಮಾಣಿಲ ಸರ್ಕಾರಿ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಭುವನೇಶ್ವರ್ ಪ್ರಸ್ತಾವನೆಗೈದರು. ಗೋವಿಂದ ಭಟ್ ಎಂ. ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಉಮಾನಾಥ ರೈ ಎಂ. ವಂದಿಸಿದರು. ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *