ಬಂಟ್ವಾಳ: ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಣ್ಣ ಊರು ಕಲ್ಲಡ್ಕ. ಕೃಷಿ, ಕೂಲಿ, ಬೀಡಿ ಕಾರ್ಮಿಕರೇ ಹೆಚ್ಚಾಗಿರುವ ಊರು ಇದು. ಇಂತಹ ಕಲ್ಲಡ್ಕದ ಹೃದಯ ಭಾಗದಲ್ಲಿ ಹೆದ್ದಾರಿಯಿಂದ 60 ಅಡಿ ಎತ್ತರದಲ್ಲಿರುವ ಗುಡ್ಡದಲ್ಲಿ ಊರಿನ ಅನೇಕ ಹಿರಿಯರು ಒಟ್ಟು ಸೇರಿ ನಮ್ಮ ಧರ್ಮದ, ಪರಂಪರೆಯ ಪ್ರತೀಕವಾದ ಭಜನಾ ಸಂಕೀರ್ತನೆಯನ್ನು ನೂರು ವರ್ಷಗಳ ಹಿಂದೆ ಮುಳಿಹುಲ್ಲಿನ ಛಾವಣಿಯ ಕಟ್ಟಡದಲ್ಲಿ ಆರಂಭಿಸಿದರು. ಊರಿನ ಅನೇಕ ಹಿರಿಯರ ತಾಳದ ಧ್ವನಿಯ ಜೊತೆಗೆ ಎಲ್ಲರ ಕಂಠದಿಂದ ಮೊಳಗಿದ ಶ್ರೀ ರಾಮಭಜನೆಯ ಅಲೆಗಳು ಊರಿಗೆಲ್ಲಾ ಪ್ರತಿಧ್ವನಿಸಿತು. ಅದೇ ಈಗ ಶ್ರೀರಾಮ ಮಂದಿರವಾಗಿ ಎಲ್ಲಾ ಹಿಂದುಗಳ ಶ್ರದ್ಧಾ ಕೇಂದ್ರವಾಗಿದೆ.
ಸನಾತನ ಹಿಂದೂ ಧರ್ಮದ ಸಮಾನತೆ, ಸದ್ವಿಚಾರಗಳು ಕೃತಿಯಲ್ಲಿಯೇ ಪ್ರಕಟಗೊಂಡಾಗ ಮಾತ್ರ ಮನುಕುಲದ ಪ್ರಗತಿ ಸಾಧ್ಯ ಎಂಬುದನ್ನು ಅರಿತ ಅಂದಿನ ಹಿರಿಯರು 1932ರಲ್ಲಿ ಇದೇ ಸ್ಥಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ, ಶ್ರೀ ರಾಮನವಮಿ ಮುಂತಾದ ಉತ್ಸವಗಳನ್ನು ಆಚರಿಸಿಕೊಂಡು ಬಂದು ಪರಿಸರದ ಮನೆ-ಮನಗಳನ್ನು ಗೆದ್ದರು.

hanuman
ಅದರ ಪರಿಣಾಮವಾಗಿ 40 ವರ್ಷಗಳ ಹಿಂದೆ 1974ರಲ್ಲಿ ಆದರ್ಶ ಪುರುಷ ಶ್ರೀರಾಮನ ಹೆಸರಿನಿಂದ ಶ್ರೀ ರಾಮ ಭಜನಾ ಮಂದಿರ ಎಂಬ ಹಂಚಿನ ಛಾವಣಿಯ ಸುಂದರ ಕಟ್ಟಡ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಮಕರ ಸಂಕ್ರಮಣದ ಶುಭ ದಿನ ಲೋಕಾರ್ಪಣೆಗೊಂಡಿತು. ಅಂದಿನಿಂದ ಈ ಮಂದಿರ ಹಿಂದು ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದಿದೆ.
ಶ್ರೀ ಸತ್ಯನಾರಾಯಣ ಪೂಜೆ (ಅನ್ನದಾನ), 83 ªಷರ್Àಗಳಿಂದ ಶ್ರೀಕೃಷ್ಣಾಷ್ಟಮಿ (ಮೊಸರು ಕುಡಿಕೆ), 40 ವರ್ಷಗಳಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀ ರಾಮನವಮಿ (ಅಖಂಡ ಭಜನೆ), ಅಯ್ಯಪ್ಪ ವ್ರತಾಚರಣೆ, ವರಮಹಾಲಕ್ಷ್ಮೀ ವ್ರತ, ವಾರದ ಭಜನೆ, ನಗರ ಭಜನೆ ಮುಂತಾದ ಚಟುವಟಿಕೆಗಳಿಂದ ಧಾರ್ಮಿಕ ಕೇಂದ್ರವಾಗಿಯೂ, ದೇಶದ ಚಿಂತನೆ ಹಾಗೂ ವ್ಯಕ್ತಿ ನಿರ್ಮಾಣದ ಕಾರ್ಯ ಮಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆ, ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಗಳ ಮೂಲಕ ಸಾಮಾಜಿಕ – ಸಾಂಸ್ಕøತಿಕ ಕೇಂದ್ರವಾಗಿಯೂ ಬೆಳೆಯಿತು.
ಯುವಕರಲ್ಲಿ ಸಾಹಸ ಪ್ರವೃತ್ತಿ ಬೆಳೆಸಲು ಗರಡಿ ಸಾಧನೆಯ ಚಟುವಟಿಕೆಗಳು, ಉಪನಯನ ಮದುವೆ-ಸೀಮಂತ ವೈಕುಂಠ ಸಮಾರಾಧನೆಯ ಕಾರ್ಯಕ್ರಮಗಳು, ಹಿಂದೂ ಸಮಾಜದ ಎಲ್ಲಾ ವರ್ಗಗಳ ಸಂಘಟನೆಯ ಚಟುವಟಿಕೆಗಳಿಗೆ ಆಸರೆಯಾಗಿ ಸಾಮರಸ್ಯದ ಕೇಂದ್ರವಾಗಿಯೂ, ಜನರ ಸಮಸ್ಯೆಗಳನ್ನು ಪಂಚಾಯತಿಕೆಯ ಮೂಲಕ ನ್ಯಾಯ ಕೊಡುವ ನ್ಯಾಯ ಕ್ಷೇತ್ರವಾಗಿಯೂ ಬೆಳೆದು ಬಂದಿದೆ. ರಾಜ್ಯದಾದ್ಯಂತ ಶಿಕ್ಷಣ – ಸಂಸ್ಕಾರ ಕ್ಷೇತ್ರದಲ್ಲೇ ಹೆಸರು ಪಡೆದ ಶ್ರೀರಾಮ ವಿದ್ಯಾಕೇಂದ್ರ ಇದೇ ಜಾಗದಲ್ಲಿ ಜನ್ಮತಳೆದ ಸಂಸ್ಥೆ. ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಹೋರಾಡಲು, ತಾಯಂದಿರ ಮಾನ, ಪ್ರಾಣ ಕಾಪಾಡಲು, ಗೋಮಾತೆಯ ರಕ್ಷಣೆಯ ಪ್ರೇರಣೆಯಾಗಿ ಸಮಾಜಕ್ಕೆ ಶಕ್ತಿ ನೀಡಿ, ಹಿಂದೂಗಳ ಸಂರಕ್ಷಣೆಯ ಕೇಂದ್ರವಾಗಿ ಶ್ರೀರಾಮ ಮಂದಿರ ಮೈ ತಳೆದಿದೆ.
2016 ಏಪ್ರಿಲ್ ತಿಂಗಳಿನಲ್ಲಿ ನೂತನ ಶಿಲಾಮಯ ಮಂದಿರದ ಪುನರ್‍ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು, ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇವರ ಅಮೃತ ಹಸ್ತದಿಂದ ಸಪರಿವಾರ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ ಹಾಗೂ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿದೆ.
ಹನುಮಾನ್ ಪ್ರತಿಷ್ಠೆ: ಇದೀಗ ಮಂದಿರದ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ಯಾನ ಮಂದಿರ ಮತ್ತು 9ಅಡಿ 9ಇಂಚು 9ನೂಲು ಎತ್ತರದ ಹನುಮಾನ್ ವಿಗ್ರಹ ಪ್ರತಿಷ್ಟೆ ಜೂನ್ 19ರಂದು ನಡೆಯಲಿರುವುದು. ಬೆಳಿಗ್ಗೆ 7ರಿಂದ ಗಣಪತಿಹವನ, ಪ್ರತಿಷ್ಠಾಹವನ, 9.10ಕ್ಕೆ ಹನೂಮಾನ್ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಪಂಚಾಮೃತಾಭೀಷೇಕ, ಕಲ್ಪೋಕ್ತ ಪೂಜೆ, 10.00ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಇವರು ಆಶೀರ್ವಚನಗೈಯಲಿದ್ದು, ಸಭಾಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಹಾಗೂ ಮುಖ್ಯ ಅತಿಥಿಯಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸಲಿದ್ದಾರೆ. 10.30ಕ್ಕೆ ಸಾರ್ವಜನಿಕ ಸಿಯಾಳಾಭಿಷೇಕ, ನಿರಂತರ ಭಜನೆ, 12.30ರಿಂದ ಅನ್ನಸಂತರ್ಪಣೆ ಹಾಗೂ ಸಂಜೆ 5.00ರಿಂದ ತಿಲತೈಲಾಭಿಷೇಕ, ಅಲಂಕಾರ, ಭಜನಾ ಮಂಗಳ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು ಎಂದು ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ ಪ್ರಭಾಕರ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *