ಶತಮಾನಗಳ ಹಿಂದೆ ಜಗತ್ತು ಅಜ್ಙಾನದ ಅಂಧಕಾರ ವ್ಯವಸ್ಥೆಗೆ ಮಾರ್ಪಟ್ಟು, ಅನಿಷ್ಟ ಪದ್ಧತಿಗಳ ಆಚರಣೆ ಜನರಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿ ಮಾನವೀಯ ಮೌಲ್ಯಗಳು ಜನರಲ್ಲಿ ಅಚ್ಚೊತ್ತಿರುವಂತೆ ಮೌಢ್ಯತೆಗಳಿಂದ ಹೊರತಂದ ಹಲವು ಧರ್ಮಗಳಲ್ಲಿ ಇಸ್ಲಾಮ್ ಧರ್ಮವು ಕೂಡ ಒಂದಾಗಿದೆ.

ಇಂದಿಗೂ ಇಸ್ಲಾಮ್ ಧರ್ಮದ ಆಚರಣೆಗಳು ಒಂದು ಉತ್ತಮ ಸಮಾಜವನ್ನು ಸ್ಥಾಪಿಸಿ ನೆಲೆಗೊಳ್ಳುವಂತೆ ಮಾಡುತ್ತಿದೆ. ಅದರಲ್ಲೂ ರಂಝಾನ್ ಎಂಬ ವ್ರತ ಆಚರಣೆ ಪ್ರತಿಯೊಬ್ಬ ಸತ್ಯವಿಶ್ವಾಸಿಯಾದ ಮುಸಲ್ಮಾನರನ್ನು ಉನ್ನತ ಸ್ವಭಾವದೆಡೆಗೆ ಆಂಮತ್ರಿಸುತ್ತದೆ ಮಾತ್ರವಲ್ಲ ಇನ್ನಷ್ಟು ಉತ್ತಮ ಮನುಷ್ಯನಾಗಿಸಲು ತರಬೇತುಗೊಳಿಸುವ ಪವಿತ್ರ ತಿಂಗಳಾಗಿದೆ.
ರಂಝಾನ್ ಮಾಸ ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬ ಮುಸಲ್ಮಾನನು ತಾನು ಗೈಯುತ್ತಿರುವ ಪಾಪ ಕೃತ್ಯಗಳಿಂದ ದೂರ ಸರಿದು ಸತ್ಕಾರ್ಯಕ್ಕೆ ಮುನ್ನುಗ್ಗಲು ಪ್ರಯತ್ನ ಪಡುತ್ತಾನೆ. ಇದಕ್ಕಾಗಿ ರಂಝಾನಿನ ಮೂವತ್ತು ದಿನಗಳ ಉಪವಾಸವನ್ನು ಕೈಗೊಂಡು ತನ್ನ ದೇಹವನ್ನು ಶುದ್ಧೀಕರಿಸಿ ದಂಡಿಸುತ್ತಾ ಖುರ್ ಆನ್ ಪಠಣ ಹಾಗೂ ವಿಶೇಷ ಪ್ರಾರ್ಥನೆಯಲ್ಲಿ ಅವನ ಅಲ್ಲಾಹನೊಂದಿಗೆ ಮಗ್ನನಾಗುತ್ತಾನೆ. ಇಸ್ಲಾಮ್ ನಿಷಿದ್ಧಗೊಳಿಸಿದ ಎಲ್ಲಾ ಕಾರ್ಯಗಳಲ್ಲಿ ಮುಕ್ತನಾಗಿ ಪಾಪ ವಿಮೋಚನೆಗೆ ರಂಝಾನ್ ವ್ರತ ಸನ್ಮಾರ್ಗ ದಾರಿ ಎಂದರೆ ತಪ್ಪಾಗಲಾರದು ಯಾಕೆಂದರೆ ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳವುದಕ್ಕೆ ರಂಝಾನ್ ಒಂದು ಉತ್ತಮ ಸಮಯವಾಗಿದೆ.
ರಂಝಾನಿನ ವೈಶಿಷ್ಟ್ಯತೆಗಳಲ್ಲಿ ದಾನವು ಕೂಡ ಒಂದು. ವುಳ್ಳವನು ಹಸಿದವನಿಗೆ ಕರುಣೆ ತೋರಿ ನಮಪೂರಕವಾಗಿ ರಂಝಾನಿನಲ್ಲಿ ದಾನ
ನೀಡುವುದು ಪುಣ್ಯ ಸತ್ಕರ್ಮದಲ್ಲೊಂದಾಗಿದೆ. ಶ್ರೀಮಂತ ಮತ್ತು ಬಡವ ಎಂಬ ಒಡಕನ್ನು ಇಲ್ಲದಾಗಿಸಲು ರಂಝಾನ್ ಒಂದು ಸ್ಫೂರ್ತಿದಾಯಕ. ಅಲ್ಲದೆ, ದಾನ ನೀಡಲು ಒಂದೇ ಬಣ, ಜಾತಿ ಹಾಗೂ ಧರ್ಮವನಾಗಿರಬೇಕಿಲ್ಲ ಎಂದು ಅದು ಸಾರುತ್ತದೆ ಹಾಗೂ ವುಳ್ಳವರು ಬಡವರಿಗೆ ಕಡ್ಡಾಯವಾಗಿ ದಾನ ನೀಡಬೇಕು ಇದರಿಂದಾಗಿ ಪರಲೋಕದಲ್ಲಿ ಆತನಿಗೆ ಪ್ರತಿಫಲ ಇದೆ ಎಂದು ಅದು ಪ್ರತಿಪಾದಿಸುತ್ತದೆ.
ಮುಸಲ್ಮಾನರ ರಂಝಾನ್ ವ್ರತ ಆಚರೆಣೆ ಸಂದರ್ಭದಲ್ಲಿ ಜಾತಿ, ಧರ್ಮದ ಹಾಗೂ ಪಂಗಡದ ಭೇದ ಭಾವಿಲ್ಲದೆ ಸಮಾಜದಲ್ಲಿ ಪರಸ್ಪರ ಗೌರವಿಸಿ ಸಹಬಾಳ್ವೆಯಿಂದ ಇರುವುದನ್ನು ನಾವು ಹೆಚ್ಚಾಗಿ ಗಮನಿಸಬಹುದು. ಅದೇ ರೀತಿ ರಮಝಾನಿನ ಇಫ್ತಾರ್ ಕೂಟ(ಉಪವಾಸ ತೊರೆಯುವ ಸಂದರ್ಭ)ದಲ್ಲಿ ಅನ್ಯ ಧರ್ಮೀಯರು ಕೂಡ ಪಾಲ್ಗೊಳ್ಳವಿಕೆಯನ್ನು ನಾವು ಕಾಣಬಹುದು. ಇದರಿಂದಾಗಿ ಸಮಾಜದ ಮೇಲೆ ಬಹು ದೊಡ್ಡ ಧನಾತ್ಮಕವಾದ ಪರಿಣಾಮ ಬಿದ್ದು ಅಭಿವೃದ್ಧಿಗೂ ಪೂರಕವಾಗುತ್ತದೆ.
ಒಟ್ಟಿನಲ್ಲಿ ರಂಝಾನ್ ಎಲ್ಲವನ್ನೂ ಮೀರಿದ ಮಾನವೀಯ ಮೌಲ್ಯದ ಅನುಭವನ್ನು ಪ್ರತಿಯೊಬ್ಬರಿಗೂ ಒದಗಿಸುತ್ತಿದೆ ಎನ್ನಬಹುದು.
* ಕಲಂದರ್ ಶಾಫೀ, ಅಡ್ಡೂರು
