ಬಂಟ್ವಾಳ: ಸರ್ಕಾರಿ ಶಾಲೆಗಳಲ್ಲಿ ಆರಂಭಗೊಂಡಿದ್ದ ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುತ್ತೇವೆ ಎನ್ನುವ ಸರಕಾರಿ ಶಾಲೆಗಳ ಶಿಕ್ಷಕರು ಹಾಗೂ ಎಸ್‍ಡಿಎಂಸಿಗಳ ಆಸೆಗೆ ಶಿಕ್ಷಣ ಇಲಾಖೆಯೇ ತಣ್ಣೀರೆರಚಲು ಸಿದ್ದತೆ ಮಾಡಿಕೊಂಡಿದ್ದು, ಮುಚ್ಚುವ ಭೀತಿಯಲ್ಲಿರುವ ಸರಕಾರಿ ಶಾಲೆಗಳಿಗೆ ಮತ್ತೊಂದು ಕಂಟಕ ಕಾದಿದೆ.3M4A4946

ಕನ್ನಡ ಅಭೀವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಡಿ.ಸಿದ್ದರಾಮಯ್ಯ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಆರಂಭವಾಗಿರುವ ಎಲ್‍ಕೆಜಿ, ಯುಕೆಜಿ ಹಾಗೂ ಒಂದನೆ ತರಗತಿಯಿಂದ ಇಂಗ್ಲಿಷ್ ಕಲಿಸಲು ಸರಕಾರಿ ಶಾಲೆಗಳಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಶಿಕ್ಷಣ ಇಲಾಖೆ ಮುಂದಾಗಿರುವುದು, ಜಿಲ್ಲೆಯ ಸರಕಾರಿ ಶಾಲೆಗಳ ಆಡಳಿತ ನಿರ್ವಹಣೆ ಹೊತ್ತಿರುವ ಶಾಲಾಭಿವೃದ್ಧಿ ಸಮಿತಿಗಳಿಗೆ ಹೊಸತಲೆನೋವು ತಂದೊಡ್ಡಿದೆ.
ಪೋಷಕರ ಆಂಗ್ಲಭಾಷಾ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ಗುರುತರ ಆರೋಪದ ನಡುವೆ, ಸರ್ಕಾರಿ ಶಾಲೆಗಳ ಎಸ್‍ಡಿಎಂ ಸಿಗಳೂ ಕೂಡ ತಮ್ಮ ಶಾಲೆಗಳಲ್ಲೂ ಆಂಗ್ಲಭಾಷೆಯನ್ನು ಕಲಿಸಿಕೊಡುವ ಮೂಲಕ ಊರ ಮಕ್ಕಳನ್ನು ಊರಶಾಲೆಯಲ್ಲಿಯೇ ಉಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದರು. ಈ ನಿಟ್ಟಿನಲ್ಲಿ “ಒಂದನೇ ತರಗತಿಯಿಂದಲೇ ಇಲ್ಲಿ ಇಂಗ್ಲೀಷ್ ಹೇಳಿಕೊಡಲಾಗುವುದು, ಎಲ್‍ಕೆಜಿ, ಯುಕೆಜಿ ಶಿಕ್ಷಣವೂ ನಮ್ಮಲ್ಲಿಯೂ ಲಭ್ಯ” ಎನ್ನುವ ಘೋಷಣೆಯನ್ನೂ ಮಾಡಿದ್ದವು. ಶಿಕ್ಷಣ ಇಲಾಖೆಯೂ ಕೂಡ ತಾಲೂಕು ಮಟ್ಟದಲ್ಲಿ ಬೇಡಿಕೆಯಿದ್ದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆಗೆ ಹಾಗೂ ಎಲ್‍ಕೆಜಿ, ಯುಕೆಜಿ ಆರಂಭಿಸಲು ಅನುಮತಿಯನ್ನೂ ನೀಡಿತ್ತು. ಎಸ್‍ಡಿಎಂಸಿಗಳ ಈ ತಂತ್ರ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಏರಿಕೆಗೂ ಕಾರಣವಾಗಿತ್ತು. ದಡ್ಡಲಕಾಡು ಶಾಲೆಯೊಂದರಲ್ಲಿಯೇ 25 ಇದ್ದ ಮಕ್ಕಳ ಸಂಖ್ಯೆ ಎರಡು ವರ್ಷಗಳಲ್ಲಿ 500 ಗಡಿ ದಾಟಲು ಕಾರಣವಾಗಿತ್ತು. ಆದರೆ ಇದೀಗ ಸರಕಾರಿ ಶಾಲೆಗಳ ಈ ಎಲ್ಲಾ ಉತ್ಸಾಹಕ್ಕೆ ತಣ್ಣೀರು ಎರಚಲು ಇಲಾಖೆ ಸಿದ್ದತೆ ನಡೆಸಿದೆ.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ಧರಾಮಯ್ಯ ರವರು, ಸರಕಾರಿ ಶಾಲೆಗಳಲ್ಲಿ ಅನಧಿಕೃತವಾಗಿ ಇಂಗ್ಲೀಷ್ ಬೋಧನೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ವಿರುದ್ದ ಗರಂ ಆಗಿದ್ದರು ಮತ್ತು ಶಿಕ್ಷಣ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದಿನ ಹದಿನೈದು ದಿನಗಳ ಒಳಗಾಗಿ ಅನಧಿಕೃತವಾಗಿ ಇಂಗ್ಲೀಷ್ ಕಲಿಕೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿ, ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು, ಜಿಲ್ಲೆಯಾದ್ಯಂತ ಎಲ್‍ಕೆಜಿ, ಯುಕೆಜಿ ಆರಂಭಿಸಲು ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆಗೆ ಇಲಾಖೆಯಿಂದ ನೀಡಿರುವ ಅನುಮತಿಯನ್ನು ರದ್ದು ಪಡಿಸುವಂತೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆಂದು ತಿಳಿದುಬಂದಿದೆ.

* ಮತ್ತೆ ಸಂಕಷ್ಟದಲ್ಲಿ ಸರ್ಕಾರಿ ಶಾಲೆಗಳು..
ಪೋಷಕರೇ ಆಂಗ್ಲಭಾಷಾ ವ್ಯಾಮೋಹಕ್ಕೆ ತುತ್ತಾಗಿದ್ದಾರೆ, ಹೀಗಾಗಿ ಸರಕಾರಿ ಶಾಲೆಗಳಿಗೆ ತಮ್ಮಮಕ್ಕಳನ್ನು ಸೇರ್ಪಡೆಗೊಳಿಸಲು ಹಿಂದೇಟು ಹಾಕುತ್ತಿದ್ದು, ಕಳೆದ ಹತ್ತುವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಈ ಅಪಾಯಕಾರಿ ಬೆಳವಣಿಗೆಯನ್ನು ತಪ್ಪಿಸಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬುದು ಶಾಲಾಭಿವೃದ್ಧಿ ಸಮಿತಿಗಳ ಹಂಬಲಕ್ಕೆ ಶಿಕ್ಷಣ ಇಲಾಖೆಯೂ ಬೆಂಬಲ ನೀಡಿ, ಎಲ್‍ಕೆಜಿ ಆರಂಭಿಸಲು ಅನುಮತಿ ನೀಡಿತ್ತು. ಆದರೆ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಿಡೀರ್ ನಿರ್ಧಾರ ಸರ್ಕಾರಿ ಶಾಲೆಗಳ ಎಸ್‍ಡಿಎಂಸಿ ಗಳ ಜೊತೆಯಲ್ಲಿ ಮಕ್ಕಳ ಪೋಷಕರಿಗೆ ಆಘಾತ ತಂದಿದೆ. ಊರ ಸರ್ಕಾರಿ ಶಾಲೆಯಲ್ಲಿಯೇ ಎಲ್‍ಕೆಜಿ ಶಿಕ್ಷಣ ಸಿಗುತ್ತದೆ ಎಂದು ಹೊಸದಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿರುವ ಮಕ್ಕಳ ಪೋಷಕರಂತು ತಲೆಮೇಲೆ ಕೈ ಹೊತ್ತು ನಿಂತಿದ್ದಾರೆ.

ವರದಿ* ಮೌನೇಶ ವಿಶ್ವಕರ್ಮ

ಪ್ರಾಧಿಕಾರದ ಆದೇಶ ಪಾಲಿಸುತ್ತೇವೆ.. -ಡಿಡಿಪಿಐ
ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ , ಯುಕೆಜಿ ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಬೋಧನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಆದೇಶವನ್ನು ದಕ್ಷಿಣ ಕನ್ನಡ ಜಿಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು.
-ವಾಲ್ಟರ್ ಡಿಮೆಲ್ಲೋ
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು-ದ.ಕ.

By Suddi9

Leave a Reply

Your email address will not be published. Required fields are marked *