ಬಂಟ್ವಾಳ: ಮಕ್ಕಳೇ ಜಗತ್ತಿನ ಸರ್ವಸ್ವ, ಹೀಗಾಗಿ ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ತುಂಬುವ ಕಾರ್ಯ ನಡೆಯಬೇಕಿದೆ ಎಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಪ್ರದಾನ ಅರ್ಚಕರಾದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಹೇಳಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಶುಕ್ರವಾರ ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ಆರಂಭಗೊಂಡ ಜಾನಪದ ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿಲ್ಲ, ಕೇವಲ ಹಣ, ಉದ್ಯೋಗದ ದೃಷ್ಟಿಕೋನದ ವಿದ್ಯೆಯಿಂದ ಬದುಕಿನಲ್ಲಿ ಸಂಕಷ್ಟವೇ ಎದುರಾಗುತ್ತದೆ ಎಂದ ಅವರು, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕøತಿ ಸಿಗುವ ಕಾರ್ಯಗಳು ಚಿಣ್ಣರಲೋಕದಂತಹಾ ಸಂಸ್ಥೆಗಳಿಂದ ಆಗಲಿ ಎಂದರು.
ತುಳುರಂಗಭೂಮಿ ಕಲಾವಿದ ಲ.ದೇವದಾಸ್ ಕಾಪಿಕಾಡ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಬೆಳಕಿಗೆ ತರುವುದು ಪುಣ್ಯದ ಕೆಲಸ, ಜಾನಪದ ಕಲೋತ್ಸವ ಜಾತ್ರೆಯ ಮಾದರಿಯಲ್ಲಿ ಸಂಪನ್ನಗೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಣ್ಣರೋತ್ಸವದ ಅಧ್ಯಕ್ಷರಾದ ಮಾಸ್ಟರ್ ಅಮೀಶ್ ಕುಮಾರ್ ಎಂ. ವಹಿಸಿದ್ದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಮೋಹನದಾಸ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಧ.ಗ್ರಾ.ಯೋಜನೆ ಅಧಿಕಾರಿ ಸುನಿತ ನಾಯ್ಕ್ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಬಿ.ಸಿ.ರೋಡ್ ಗಾಣದಪಡ್ಪು ರಾಣಿ ಅಬ್ಬಕ್ಕಾ ಕಲಾಮಂಟಪದವರೆಗೆ ನಡೆದ ಜಾನಪದ ದಿಬ್ಬಣದ ಮೆರವಣಿಗೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಚಾಲನೆ ನೀಡಿದರು. ಮೆರವಣಿಗೆಗೆ ಕೀಲು ಕುದುರೆ, ಗೊಂಬೆ ಬಳಗ, ಬಣ್ಣದ ಕೊಡೆಗಳು, ಪೂಜಾ ಕುಣಿತ, ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಯಕ್ಷಗಾನ ವೇಷ, ಡೊಳ್ಳು ಕುಣಿತ, ಮಹಿಳಾ ಚೆಂಡೆ, ಮಹಿಳಾ ವೀರಗಾಸೆ, ಎನ್.ಸಿ.ಸಿ. ಬ್ಯಾಂಡ್, ಸ್ವಾಗತ ಕಲಶ ಮೆರುಗು ನೀಡಿತು.
ಬಾಲ ಪ್ರತಿಭೆಗಳಾದ ವೀಕ್ಷಿತಾ ಕುಲಾಲ್, ವಚನ್ ಶೆಟ್ಟಿರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕಲೋತ್ಸವ ಸಮಿತಿ ಗೌರವಾಧ್ಯಕ್ಷ ಜಯರಾಂ ರೈ ವಿಟ್ಲ ಸ್ವಾಗತಿಸಿದರು. ಅಧ್ಯಕ್ಷ ರೊನಾಲ್ಡ್ ಡಿಸೋಜ ವಂದಿಸಿದರು. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
