ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆದ ಆಯುರ್ವೇದ ಸಂಶೋಧನಾ ಪ್ರಬಂಧ ಮಂಡನಾ ಸ್ಪರ್ಧೆಯ ಅಂತಿಮ ಸುತ್ತು ಪಿ.ಜಿ.ಸೆಮಿನಾರ್ ಹಾಲ್‍ನಲ್ಲಿ ನಡೆಯಿತು.
12 ವಿವಿಧ ಸ್ನಾತಕೋತ್ತರ ವಿಭಾಗದ ವೈದ್ಯ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಿದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಸೂತಿ ತಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಡಾ.ಶ್ರುತಿ ಆರ್ ಪ್ರಥಮ ಸ್ಥಾನಿಯಾದರು. ಶರೀರ ರಚನಾ ವಿಭಾಗದ ಡಾ.ಚೈತ್ರ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು. ಸ್ಪರ್ಧೆಯ ತೀರ್ಪುಗಾರರಾಗಿ ಡೆಹ್ರಾಡೂನ್ ಸಂಶೋಧಕ ಡಾ.ಶ್ರೀಧರ ಬಾಯರಿ, ಶಾರದಾ ಆಯುರ್ಧಾಮ ಮುಖ್ಯ ಅಧೀಕ್ಷಕರು ಡಾ.ರವಿಗಣೇಶ್, ಆಯುರ್ವೇದ ಸಂಶೋಧಕ ಡಾ.ರೋಹಿತ್ ಗೋಕರ್ಣ ಭಾಗವಹಿಸಿದರು.

ಡಾ.ಶ್ರೀಧರ್ ಬಾಯರಿ ಮಾತನಾಡಿ, ಆಧುನಿಕ ಕಾಲ ಘಟ್ಟದಲ್ಲಿ ಸಂಶೋಧನೆ ಹಾಗೂ ಅದರ ಪ್ರಸ್ತುತೀಕರಣ ಹಾಗೂ ಸಂಶೋಧನಾ ನಿಯತಕಾಲಿಕಗಳಲ್ಲಿ ಅವುಗಳನ್ನು ಸಾಧರ ಪ್ರಕಟಪಡಿಸುವ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಶಾಸ್ತ್ರ ಜ್ಞಾನವನ್ನು ಆಧುನಿಕ ತಂತ್ರ ಜ್ಞಾನದ ಜೊತೆಗೆ ಪ್ರಯೋಗ ವಿಕಸನಕೊಳಪಡಿಸಿದಾಗಲಷ್ಟೇ ಶಾಸ್ತ್ರದ ತತ್ವಾರ್ಥ ಮತ್ತು ಮಥಿತಾರ್ಥಗಳು ಜನಮನದಲ್ಲಿ ಆಳವಾಗಿ ರೂಢಗೊಳ್ಳುತ್ತವೆ. ಮತ್ತು ವಿಶ್ವಮಾನ್ಯತೆಗಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂಬ ಸತ್ಯವನ್ನು ನಿರೂಪಿಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಶೆಟ್ಟಿ, ವಿಚಾರ ಸಂಕಿರಣದ ಸಂಶೋಧನಾ ಮಾರ್ಗದರ್ಶಿ ಸದಸ್ಯರು ಹಾಗೂ ಉಪನ್ಯಾಸಕ- ಪ್ರಾಧ್ಯಾಪಕ ವೃಂದ ಸಮಾರಂಭದಲ್ಲಿ ಉಪಸ್ಥಿತರಿದ್ದರು.
—
