ರೂ 12, 86, 770 ಕೋಟಿ ಮೂಲಭೂತ ಸೌಕರ್ಯಕ್ಕೆ ವಿನಿಯೋಗ
ಬಂಟ್ವಾಳ:ದೇಶದಲ್ಲಿ ಒಟ್ಟು 4,449 ಶಾಖೆ ಮತ್ತು 12ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಕಳೆದ ಸಾಲಿನಲ್ಲಿ ಒಟ್ಟು ರೂ 36 ಸಾವಿರ ಕೋಟಿ ಮೊತ್ತದ ವಿಮಾ ಕಂತು ಸಂಗ್ರಹಿಸಿ ಲಾಭಾಂಶದಲ್ಲಿ ಶೇ.5ರಂತೆ ಒಟ್ಟು ರೂ 12, 86, 770 ಕೋಟಿ ಮೊತ್ತದ ಅನುದಾನವನ್ನು ದೇಶದ ಜನತೆಗೆ ವಿವಿಧ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ವಿನಿಯೋಗಿಸಿದೆ ಎಂದು ಉಡುಪಿ ಎಲ್ಲೈಸಿ ವಿಭಾಗೀಯ ವ್ಯವಸ್ಥಾಪಕ ವಿಶ್ವೇಶ್ವರ ರಾವ್ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಭಾರತೀಯ ಜೀವ ವಿಮಾ ನಿಗಮ ಶಾಖೆಯ ನೂತನ ಕಟ್ಟಡ ಉದ್ಘಾಟನೆಯ 9ನೇ ವರ್ಷಾಚರಣೆ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಪ್ರತಿನಿಧಿಗಳ ಸಭೆಯಲ್ಲಿ ಸಾಧಕ ಪ್ರತಿನಿಧಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಈಗಾಗಲೇ ಪಾಲಿಸಿದಾರರಿಗೆ ಶೇ.99.8ರಷ್ಟು ವಿಮೆ ಪಾವತಿಸುವಲ್ಲಿ ಯಶಸ್ವಿಯಾಗಿರುವ ಸಂಸ್ಥೆಯು ಒಟ್ಟು ರೂ 20,57,625 ಕೋಟಿ ಮೊತ್ತದ ನಗದು ಮತ್ತು ರೂ 22,10,378ಕೋಟಿ ಮೊತ್ತದ ಆಸ್ತಿ ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್ ವಿಮಾ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ವಿವರಿಸಿದರು.ಬಂಟ್ವಾಳ ಶಾಖಾಧಿಕಾರಿ ಡಿ.ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉಡುಪಿ ವಿಭಾಗೀಯ ಮಾರುಕಟ್ಟೆ ಅಧಿಕಾರಿ ರಾಜೇಶ್ ಮುದೋಳ್ ಮಾತನಾಡಿ, ದೇಶದಲ್ಲಿ ಎಲ್ಲೈಸಿ ಸಂಸ್ಥೆಯು 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ
ಪುಟ್ಟ ಮಕ್ಕಳಿಂದ ವಯೋವೃದ್ಧರತನಕ ವಿವಿಧ ಪಾಲಿಸಿಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.ಇದೇ ವೇಳೆ ಸಾಧಕ ಪ್ರತಿನಿದಿಗಳಾದ ಸತ್ಯನಾರಾಯಣ ರೈ ಮತ್ತು ರೋಹಿದಾಸ್ ಕುಂದರ್ ಇವರನ್ನು ಸನ್ಮಾನಿಸಲಾಯಿತು. ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿನಿಧಿ ನಾರಾಯಣ ಅಮೀನ್ ಸ್ವಾಗತಿಸಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಪ್ರತಿನಿಧಿ ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.
