ಬಂಟ್ವಾಳ:ಮಾ.4: ಯಕ್ಷಗಾನವು ಭಾರತೀಯ ಸಂಸ್ಕøತಿಯನ್ನು ಪರಿಚಯಿಸಿ ಸಂಸ್ಕಾರ ನೀಡುವ ದೇವದತ್ತ ವಿಶಿಷ್ಟ ಕಲೆಯಾಗಿದೆ. ಎಲ್ಲಾ ವರ್ಗ ಹಾಗೂ ಜಾತಿ ಮತದವರನ್ನೂಆಕರ್ಷಿಸುವ ವಿಶಿಷ್ಟ ಕಲೆಯಾಗಿದೆ ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಕೈಯೂರು ನಾರಾಯಣ ಭಟ್ ಹೇಳಿದರು.
ಅವರು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಘಟಕದಿಂದ ಸರಕಾರಿ ಪ್ರೌಢ ಶಾಲೆ ಸಾಲೆತ್ತೂರಿನಲ್ಲಿ ಮಾ.4 ರಂದು ಏರ್ಪಡಿಸಲಾದ ತೋಡುಗುಳಿ ಶಂಕರ ಭಟ್ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಯಕ್ಷಗಾನ ಅಂದು-ಇಂದು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಯಕ್ಷಗಾನ ಆಬಾಲ ವೃದ್ದರಿಗೂ ಪ್ರಿಯವಾದದ್ದು. ಬಯಲಾಟವಾಗಿ ಆರಾಧನಾ ಕಲೆಯಾಗಿ ಸೇವೆಯಾಟ ಇಂದು ಹೆಚ್ಚಾಗಿ ನಡೆಯುತ್ತಿದೆ. ಜೀವನಕ್ಕೆ ಒಳ್ಳೆಯ ಸಂದೇಶ ನೀಡುವ ಯಕ್ಷಗಾನ ಕಲೆ ಮನರಂಜನೆಯ ಜೊತೆಗೆ ವೈಚಾರಿಕತೆಯನ್ನು ಬೆಳೆಸುತ್ತದೆ. ತಾಳ ಮದ್ದಳೆ ಹಾಗೂ ಯಕ್ಷಗಾನದ ಕೆಲವು ರಸ ಪ್ರಸಂಗಗಳನ್ನು ಉಲ್ಲೇಖಿಸಿ ಮಾತನಾಡಿದರು.
ಪ್ರೌಢ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಧವ ಮಾವೆ ಮಾತನಾಡಿ ಜಿಲ್ಲೆಯ ಯಕ್ಷಗಾನ ಕಲೆ ತಮ್ಮ ಅಭಿಮಾನದ ಸಂಕೇತವಾಗಿದೆ. ಶಾಲಾ ಕಾಲೇಜುಗಳಲ್ಲಿ ಕಲಾವಿದರಾಗಲು ತರಬೇತಿ ನೀಡಬೇಕು. ಕಲೆಯ ಉಳಿವಿಗಾಗಿ ಪ್ರಯತ್ನ ಅಗತ್ಯ ಎಂದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ದೇವದಾಸ ಶೆಟ್ಟಿ ಸಾಲೆತ್ತೂರು ನಿವೃತ್ತ ಶಿಕ್ಷಣ ಅಧಿಕಾರಿ ಕೃಷ್ಣ ಶರ್ಮ, ಸುಬ್ರಮಣ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಾಗೇಶ್ ರಾವ್ ಉಪಸ್ಥಿತರಿದ್ದರು.
ನಿಕಟ ಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ಶಾಲಾ ಮುಖ್ಯೋಪಾದ್ಯಾಯ ರೇವಣ್ಣ ವಂದಿಸಿದರು. ಕನ್ನಡ ಶಿಕ್ಷಕಿ ಶಶಿಕಲಾ ನಿರೂಪಿಸಿದರು.
