ಪುಚ್ಚಮೊಗರು: ರೂ 4ಕೋಟಿ ವೆಚ್ಚದ ಕಿಂಡಿ ಅಣೆಕಟ್ಟೆ :ಸಚಿವ ರೈ ಭರವಸೆ
ಬಂಟ್ವಾಳ:ತಾಲ್ಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೂ 36ಕೋಟಿ ವೆಚ್ಚದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಶಸ್ವಿಗೊಳಿಸುವುದರ ಜೊತೆಗೆ ಈ ಪ್ರದೇಶದಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಇಲ್ಲಿನ ಪುಚ್ಚಮಗೊಗರು ಫಲ್ಗುಣಿ ಹೊಳೆಗೆ ರೂ 4ಕೋಟಿ ವೆಚ್ಚದ ಹೊಸ ಕಿಂಡಿ ಅಣೆಕಟ್ಟೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರಿನಲ್ಲಿ ಭಾನುವಾರ ರಾತ್ರಿ ನಡೆದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನೂತನ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಇವರಿಗೆ ಸನ್ಮಾನ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ಧಕಟ್ಟೆ ಪ್ರದೇಶಕ್ಕೆ ಈಗಾಗಲೇ ಪೊಲೀಸ್ ಹೊರಠಾಣೆ ಮತ್ತು ಪಶುವೈದ್ಯಕೀಯ ಕೇಂದ್ರ ಮಂಜೂರಾಗಿದ್ದು, ಇಲ್ಲಿನ ವಿದ್ಯುತ್ ಲೋ-ವೋಲ್ಟೇಜ್ ಸಮಸ್ಯೆ ನಿವಾರಿಸಲು ಕೆಪಿಟಿಸಿಎಲ್ ವತಿಯಿಂದ 110 ಕೆವಿ ಸಾಮಥ್ರ್ಯದ ವಿದ್ಯುತ್ ಉಪಕೇಂದ್ರ ಮಂಜೂರಾಗಿ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಈಗಾಗಲೇ ಇಲ್ಲಿನ ಅಣ್ಣಳಿಕೆ-ಕರ್ಪೆ-ಸಿದ್ಧಕಟ್ಟೆ ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಅಣ್ಣಳಿಕೆ-ಕರಿಮಲೆ-ವಾಮದಪದವು ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಳಿಸಲು ಅನುದಾನ ಮಂಜೂರಾಗಿದೆ.

ಇಲ್ಲಿನ ಭಕ್ತರ ಬೇಡಿಕೆಯಂತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆಗೆ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ರೂ 10ಲಕ್ಷ ವೆಚ್ಚದಲ್ಲಿ ತುರ್ತು ತೇಪೆ ಡಾಂಬರೀಕರಣ ಕಾಮಗಾರಿ ನಡೆಸಲಾಗಿದ್ದು, ಇಲ್ಲಿನ ಅರಳ-ಕಲ್ಲೇರಿ ರಸ್ತೆ ಸಹಿತ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ರಸ್ತೆ ಡಾಂಬರೀಕರಗೊಳಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ಎಪಿಎಂಸಿ ನೂತನ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕ ದುಡಿಮೆ ಮತ್ತು ಕ್ಷೇತ್ರದಲ್ಲಿ ಸಚಿವ ರೈ ಅವರು ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದ ಗೆಲುವು ಸಾಧ್ಯವಾಗಿದೆ ಎಂದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬೂಡ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಎಪಿಎಂಸಿ ನೂತನ ಸದಸ್ಯರಾದ ಕೆ.ಪದ್ಮನಾಭ ರೈ, ಚಂದ್ರಹಾಸ ರೈ, ಪುರಸಭೆ ಉಪಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸದಾಶಿವ ಬಂಗೇರ, ಜಗದೀಶ ಕುಂದರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಉಪಾಧ್ಯಕ್ಷೆ ವಿನಯ ಪೂಜಾರಿ, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ರಾಯಿ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸಿದ್ಧಕಟ್ಟೆ ವಲಯ ಸಮಿತಿ ಅಧ್ಯಕ್ಷ ಶಿವಾನಂದ ರೈ, ಮೆಸ್ಕಾಂ ನಿರ್ದೇಶಕ ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ವಂದಿಸಿದರು. ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ ಮತ್ತು ಸತೀಶ ಕಾರಂಬಡೆ ಕಾರ್ಯಕ್ರಮ ನಿರೂಪಿಸಿದರು.
