ಮೂಡುಬಿದಿರೆ: ಕಟ್ಟಡವೊಂದು ಮುಗಿಲೆತ್ತರಕ್ಕೆ ಸುಭದ್ರವಾಗಿ ಬೆಳೆದು ನಿಲ್ಲಲ್ಲು ಅದರ ತಳಹದಿಯ ಕಲ್ಲುಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗೆ ಯಾರಿಗೂ ಕಾಣದ ಅಡಿಗಲ್ಲಿನಂತೆ ಸಮಾಜದ ಹಿತಕ್ಕಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಹೀಗೆ ಎಲ್ಲರಿಗೂ ಪ್ರೇರಕವಾಗುವ ಹಾದಿಯಲ್ಲಿ ಸಾರ್ಥಕ ಬದುಕು ಕಂಡವರು ಪಿ.ಎಸ್.ಭಟ್ ಎಂದು ಆರೆಸ್ಸೆಸ್ ಪ್ರಾಂತ ಸಹ ಸಂಘ ಚಾಲಕ ಡಾ. ವಾಮನ ಶೆಣೈ ಹೇಳಿದರು. ಅವರು ಹಿರಿಯ ಸಮಾಜ ಸೇವಕ. ಗಾಂಧೀವಾದಿ ಸಂಘ ಪ್ರಮುಖರೆನಿಸಿದ್ದ ಪಿ.ಸದಾನಂದ ಭಟ್ ನಿಧನ (ಜ23) ಹಿನ್ನೆಲೆಯಲ್ಲಿ ಸಮಾಜ ಮಂದಿರದಲ್ಲಿ ಸೋಮವಾರ ಸಂಜೆ ಸಂಘ ಪರಿವಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನಗಳನ್ನು ಸಲ್ಲಿಸಿದರು.
ತಾನು ಒಳ್ಳೆಯವನಾದಾಗ ಸಮಾಜವೂ ಒಳ್ಳೆಯದಾಗುತ್ತದೆ ಎನ್ನುವ ವಿವೇಕಾನಂದರ ತತ್ವಕ್ಕೆ ಮಾದರಿಯಾಗಿದ್ದ ಪಿ.ಎಸ್.ಭಟ್ಟರು ನಡೆ ನುಡಿಯಲ್ಲಿ ಅಂತರವಿಲ್ಲದ ಓರ್ವ ಸಂಘ ಕಾರ್ಯಕರ್ತರಾಗಿ ಉತ್ಕೃಷ್ಠ ನಿದರ್ಶನ ಎಂದ ಅವರು ಸಮಾಜದ ಕಲ್ಯಾಣಕ್ಕಾಗಿಯೇ ಸಮರ್ಪಿತ ಜೀವನ ನಡೆಸಿದವರು ಎಂದರು.
ಮೂಡುಬಿದಿರೆ ಸಂಘ ಚಾಲಕ ಎಂ.ವಾಸುದೇವ ಭಟ್ ಮಾತನಾಡಿ ಮೂಡುಬಿದಿರೆಯ ಅಭಿವೃದ್ಧಿಯಲ್ಲಿ ಮರೆಯಲಾಗದ ಕೊಡುಗೆ ನೀಡಿರುವ ಪಿ.ಎಸ್.ಭಟ್ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವುದಕ್ಕೆ ಮಾದರಿ, ನಿದರ್ಶನವಾಗಿದ್ದವರು. ಹೆಸರಿಗಾಗಿ ಹಾತೊರೆಯದೇ ಹಿಂದುಳಿದು ಇತರರನ್ನು ಮುನ್ನಡೆಸಿದವರು. ಅವರು ಜೀವನದಲ್ಲಿ ಪಾಲಿಸಿಕೊಂಡು ಬಂದ ಆರ್ಥಿಕ ಶುದ್ಧತೆ ಎಲ್ಲರಿಗೂ ಮಾದರಿ ಎಂದರು.
ವಕೀಲ ಕೆ. ಆರ್. ಪಂಡಿತ್ ಮಾತನಾಡಿ ಅಧಿಕಾರ ಬೇಡ ಎನ್ನುತ್ತಿದ್ದ ಅಪರೂಪದ ವ್ಯಕ್ತಿತ್ವ ಸದಾನಂದ ಭಟ್ ಎಂದು ಸ್ಮರಿಸಿಕೊಂಡರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೆ.ವಿಶ್ವನಾಥ ಪ್ರಭು ತಾವು ಪಿ.ಎಸ್.ಭಟ್ ಒಡನಾಟದಲ್ಲಿ ಕಳೆದ ಐದು ದಶಕಗಳ ಒಡನಾಟವನ್ನು ಹಂಚಿಕೊಂಡರು. ಪುರಸಭಾ ಸದಸ್ಯ ಎಂ.ಬಾಹುಬಲಿ ಪ್ರಸಾದ್ ಅವರು ತಮ್ಮ ಶ್ವೇತ ವಸನದಂತೆ ಪರಿಶುದ್ಧ ಮನಸ್ಸು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರ ಕಾರ್ಯದಲ್ಲಿ ಅವರು ತೊಡಗಿಕೊಂಡ ಕಾರ್ಯವನ್ನು ತಿಳಿಸಿದರು.
ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಮಾತನಾಡಿ ಪಿ.ಎಸ್. ಭಟ್ ಅವರು ಆದರ್ಶಗಳಿಂದ ಕೂಡಿದ ಅಧ್ಬುತ, ಅವಿಸ್ಮರಣೀಯ ವ್ಯಕ್ತಿತ್ವ ಎಂದರು. ಪಿ.ಎಸ್.ಭಟ್ ಅವರ ಸಹೋದರ ಪಿ.ವಿಶ್ವನಾಥ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಆರೆಸ್ಸೆಸ್ ಪ್ರಮುಖರು, ವಿಹಿಂಪ, ಬಜರಂಗದಳದ ನಾಯಕರು,ಕಾರ್ಯಕರ್ತರು, ಪಿ.ಎಸ್.ಭಟ್ ಅವರ ಆಪ್ತರು, ಹಿತೈಶಿಗಳು ಪಾಲ್ಗೊಂಡಿದ್ದರು. ವೇದಿಕೆಯ ಗಣ್ಯರೂ ಸೇರಿದಂತೆ ಪಿ.ಎಸ್.ಭಟ್ ಅವರ ಭಾವಚಿತ್ರಕ್ಕೆ ಸೇರಿದವರಿಂದ ಪುಷ್ಪಾಂಜಲಿ ನಮನ,ಕೊನೆಯಲ್ಲಿ ಮೌನ ಪ್ರಾರ್ಥನೆ ನಡೆಯಿತು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ನಿರೂಪಿಸಿದರು.

