ಬಂಟ್ವಾಳ : ಮೆಳ್ಳೆಗಣ್ಣು ಹೊಂದಿದ್ದ ಆ ಹದಿನಾರರ ಬಾಲಕಿಗೆ ಇದ್ದಕ್ಕಿಂದ್ದಂತೆಯೇ ದೃಷ್ಟಿ ದೋಷ.. 10 ವರ್ಷದ ಬಾಲಕನಿಗೆ ಕಿವಿ ಕೇಳದಾಯ್ತು.. ಹೀಗೆ ಒಂದಲ್ಲ ಏಳು ಹೊಸ ಎಂಡೋಪ್ರಕರಣಗಳು ಬಂಟ್ವಾಳ ತಾಲೂಕಿನಲ್ಲಿ ಪತ್ತೆಯಾಗಿದ್ದು, ಎಂಡೋಸಲ್ಫಾನ್ ನ ಭೀಕರತೆ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಪುನರಪಿ ಸಾಬೀತಾಗಿದೆ.
ಹೌದು..ಕೊಕ್ಕಡದಲ್ಲಿ ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಇಡೀ ಜಿಲ್ಲೆಯೇ ಬಿದ್ದಿದೆ. ಜಿಲ್ಲೆಯಲ್ಲಿ ಎಂಡೋಸಂತ್ರಸ್ತ ಕುಟುಂಬಗಳು ಎದುರಿಸುತ್ತಿರುವ ನೋವು, ಸಂಕಟ, ಅಹಾಯಕತೆಯನ್ನು ಸಾಮೂಹಿಕ ಆತ್ಮಹತ್ಯೆ ಘಟನೆ ಎತ್ತಿಹಿಡಿದಿದೆ. ಒಂದೆಡೆಯಲ್ಲಿ ಸರ್ಕಾರ ಎಂಡೋ ದುಷ್ಪರಿಣಾಮದಿಂದ ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುವವರಿಗೆ ಸೂಕ್ತ ಪುನರ್ವಸತಿ, ಪಾಲನೆಗೆ ಬದ್ದ ಎಂದು ಹೇಳುತ್ತಾ ಬಂದಿದ್ದರೂ, ಎಂಡೋ ಸಂತ್ರಸ್ತರ ಸಂಕಟ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿದೆ. ಮಹಾಮಾರಿ ಎಂಡೋಸಲ್ಫಾನ್ ಸಿಂಪಡಿಕೆ ಎಂಬ ದುರ್ಘಟನೆ ನಡೆದು ಮೂರು ದಶಕಗಳು ಕಳೆದಿದ್ದರೂ, ಅದರ ದುಷ್ಪರಿಣಾಮ ಇನ್ನೂ ಮಾನವಸಂಕುಲವ್ನು ಬಿಟ್ಟಿಲ್ಲ. ಈ ಎಲ್ಲದರ ನಡುವೆ ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ 375 ಎಂಡೋ ಸಂತ್ರಸ್ತರಿದ್ದು,ಇತ್ತೀಚೆಗಷ್ಟೇ 7 ಹೊಸ ಎಂಡೋ ಪ್ರಕರಣಗಳು ಪತ್ತೆಯಾಗಿರುವುದು ಆತಂಕವನ್ನುಂಟುಮಾಡಿದೆ.
ತಾಲೂಕಿನ 8 ಪ್ರಾಥಮಿಕ ಆರೋಗ್ಯಕೇಂದ್ರಗಳ ಪೈಕಿ, ಕರ್ನಾಟಕ-ಕಾಸರಗೋಡು ಗಡಿ ಪ್ರದೇಶವಾದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಆಸುಪಾಸಿನಲ್ಲಿ 108 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ಹೊಸದಾಗಿ ನಾಲ್ಕು ಪ್ರಕರಣಗಳು ಇಲ್ಲಿ ಪತ್ತೆಯಾಗಿವೆ. ಮಾಣಿ ಪ್ರಾ.ಆರೋಗ್ಯ ಕೇಂದ್ರವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಪ್ರಕರಣವಿದ್ದು, ಹೊಸದಾದ ಒಂದು ಪ್ರಕರಣದೊಂದಿಗೆ ಇಲ್ಲಿನ ಎಂಡೋಪೀಡಿತರ ಸಂಖ್ಯೆ ಐದಕ್ಕೇರಿದೆ. ಮಂಚಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈ ಮೊದಲು ಯಾವುದೇ ಪ್ರಕರಣಗಳಿರಲಿಲ್ಲ, ಇದೀಗ ಹೊಸ ಎರಡು ಪ್ರಕರಣ ವರದಿಯಾಗಿದೆ. ಉಳಿದಂತೆ ಅಳಿಕೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 36, ದೈವಸ್ಥಳ 3, ಪೆರುವಾಯಿ 65, ರಾಯಿ 1, ಪುಂಜಾಲಕಟ್ಟೆ 6 ಹಾಗೂ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 145 ಪ್ರಕರಣಗಳು ಈಗಾಗಲೇ ದಾಖಲಾಗಿದೆ.
284 ಮಂದಿಗೆ ಪಿಂಚಣಿ:
375 ಎಂಡೋ ಸಂತ್ರಸ್ತರ ಪೈಕಿ 25 ಶೇ. ದಿಂದ 60 ಶೇಕಡಾ ವರೆಗೆ ಅಂಗವಿಕಲತೆ ಹೊಂದಿದ 83 ಮಂದಿಗೆಮಾಸಿಕ 1500 ರೂ ಹಾಗೂಶೇ.60ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದ 201 ಮಂದಿಗೆ ಮಾಸಿಕ 3000 ರೂ ಪಿಂಚಣಿ ದೊರೆಯುತ್ತಿದೆ ಎಂದು ತಾಲೂಕು ಕಛೇರಿಯ ಎಂಡೋ ಪ್ರಕರಣದ ಮೇಲ್ವಿಚಾರಕಿ ವಿನುತಾ ತಿಳಿಸಿದ್ದಾರೆ.
ಹೊಸ ಪ್ರಕರಣ-ಯಾಕಿಷ್ಟು ತಡ..?
ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ 16 ರ ಬಾಲಕಿಗೆ ಮೆಳ್ಳೆಗಣ್ಣಿನ ಸಮಸ್ಯೆ ಬಾಲ್ಯದಿಂದಲೇ ಇತ್ತು. ಆದರೆ ಅದಕ್ಕೆ ಎಂಡೋದುಷ್ಪರಿಣಾಮದ ತೀವ್ರತೆಯೂ ಕಾರಣ ಎಂಬ ಸತ್ಯ ಗೊತ್ತಾದದ್ದು ಇತ್ತೀಚೆಗಷ್ಟೇ, ದೃಷ್ಟಿ ದೋಷದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಎಂಡೋಪರಿಣಾಮ ಎಂಬ ಅಂಶ ಬಯಲಾಗಿದೆ. ಅದೇ ಊರಿನ 10 ವರ್ಷದ ಬಾಲಕನಿಗೆ ಕಿವುಡುತನದ ಸಮಸ್ಯೆ ಇತ್ತೀಚೆಗಷ್ಟೇ ಧೃಡಪಟ್ಟಿದೆ, 8 ವರ್ಷದ ಬಾಲಕನ ಬುದ್ದಿಮಾಂದ್ಯತೆಯೂ ವೈದ್ಯರ ತಪಾಸಣೆ ಬಳಿಕ ಧೃಡಪಟ್ಟಿದೆ. ಮತ್ತೊಂದೆಡೆ ಇದೇ ಊರಿನ 8 ವರ್ಷದ ಬಾಲಕ ಬಲಹೀನತೆಯಿಂದ ಹಾಸಿಗೆ ಹಿಡಿದಿದ್ದಾನೆ. ಇತ್ತಮಂಚಿ ಗ್ರಾಮದ ಇಬ್ಬರು ಅವಳಿಮಕ್ಕಳುಬುದ್ದಿಮಾಂದ್ಯತೆಯ ಸಮಸ್ಯೆಯಿಂದ ಬಳಲುತ್ತಿದ್ದು ಹೊಸ ಎಂಡೋ ಪ್ರಕರಣವೆಂದು ಆರೋಗ್ಯ ಇಲಾಖೆ ಎಂಡೋ ಪೀಡಿತರ ಪಟ್ಟಿಗೆ ಈ ಮಕ್ಕಳನ್ನು ಸೇರ್ಪಡೆಗೊಳಿಸಿದ್ದಾರೆ. ಮಕ್ಕಳ ತಾಯಿ ಪುಣಚಮೂಲದವರು ಎನ್ನುವ ಹಿನ್ನೆಲೆಯಲ್ಲಿ ಈ ಪ್ರಕರಣವೂ ಎಂಡೋ ಎಂದು ವೈದ್ಯರು ಸಂಶಯಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಹುಟ್ಟಿನಿಂದಲೇ ಅಂಗವಿಕಲತೆಯ ಸಮಸ್ಯೆ ಎದುರಿಸುತ್ತಿದ್ದ 30 ವರ್ಷದ ಯುವತಿಯನ್ನು ಎಂಡೋ ಪ್ರಕರಣವೆಂದು ವೈದ್ಯರು ಶಿಫಾರಸ್ಸುಮಾಡಿದ್ದಾರೆ.
ಒಟ್ಟಿನಲ್ಲಿ ಎಂಡೋಪೀಡಿತರ ಬಗ್ಗೆ ಸರ್ಕಾರ ಇನ್ನು ಮುಂದಾದರೂ ಗಮನೀಯ ಹೆಜ್ಜೆ ಇಡುವ ಮೂಲಕ, ಎಂಡೋ ಪೀಡಿತರ ಬಾಳಲ್ಲಿ ಹೊಸಬೇಳಕು ಮೂಡುವಲ್ಲಿ ಶ್ರಮಿಸಬೇಕಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಹೊಸ 7 ಎಂಡೋ ಪ್ರಕರಣಗಳು ಪತ್ತೆಯಾಗಿದ್ದು, ಈ ಪಟ್ಟಿಯನ್ನು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿದೆ.
ಡಾ.ದೀಪಾಪ್ರಭು
ತಾಲೂಕು ಆರೋಗ್ಯಾಧಿಕಾರಿ-ಬಂಟ್ವಾಳ ತಾಲೂಕು
ಆರೋಗ್ಯ ಇಲಾಖೆಯಿಂದ ಬಂದ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ, ಡಿಸೆಂಬರ್ ಅಂತ್ಯಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಖಜಾನೆವಿಭಾಗಕ್ಕೆ ಪಟ್ಟಿ ವರ್ಗಾಯಿಸಲಾಗಿದೆ. ಮುಂದಿನ ಫೆಬ್ರವರಿಯಿಂದ ಮಾಸಿಕಪಿಂಚಣಿ ಲಭ್ಯವಾಗಲಿದೆ.
ಪುರಂದರ ಹೆಗ್ಡೆ
ತಹಶೀಲ್ದಾರರು, ಬಂಟ್ವಾಳ ತಾಲೂಕು

