ನವದೆಹಲಿ: ಹೆದ್ದಾರಿಗಳಲ್ಲಿ ಪಾನಮತ್ತ ಚಾಲಕರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದಿಟ್ಟ ನಿಲುವು ಕೈಗೊಂಡಿರುವ ಸುಪ್ರೀಂಕೋರ್ಟ್, ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಗುರುವಾರ ಮಹತ್ವದ ಆದೇಶ ನೀಡಿದೆ.
ಪಾನಮತ್ತ ಚಾಲಕ ರಿಂದ ಸಂಭವಿಸುವ ಅಪಘಾತಗಳಲ್ಲಿ ಪ್ರತಿವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಆದೇಶ ನೀಡಿರುವ ನ್ಯಾಯಾಲಯ, 2017ರ ಏಪ್ರಿಲ್ ಒಳಗೆ ದೇಶಾದ್ಯಂತ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಮಾ.31ರ ನಂತರ ಹೆದ್ದಾರಿಯ ಇಕ್ಕೆಲಗಳಲ್ಲಿ ಮದ್ಯದ ಮಳಿಗೆ ತೆರೆಯಲು ಸರ್ಕಾರಗಳು ಪರವಾನಗಿ ನೀಡಬಾರದು ಹಾಗೂ ಈಗಿರುವ ಮದ್ಯದ ಅಂಗಡಿಗಳ ಪರವಾನಗಿಯನ್ನು ಭವಿಷ್ಯದಲ್ಲಿ ನವೀಕರಿಸಬಾರದೆಂದೂ ಸುಪ್ರೀಂ ಸೂಚಿಸಿದೆ. ಈ ಮಹತ್ವದ ಆದೇಶದಿಂದಾಗಿ ಇನ್ನು ಕೆಲವೇ ತಿಂಗಳಲ್ಲಿ ದೇಶದ ಎಲ್ಲ ಹೆದ್ದಾರಿಗಳು ಮದ್ಯ ಅಂಗಡಿಗಳಿಂದ ಮುಕ್ತವಾಗಲಿವೆ.
ಅರೈವ್ ಸೇಫ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಹೆದ್ದಾರಿಗಳ ಪಕ್ಕದಲ್ಲಿ ನಿಗದಿತ ಅಂತರದಲ್ಲಿ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸಬಹುದು ಎಂಬ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರೈವ್ ಸೇಫ್ ಸಂಘಟನೆ ಸುಪ್ರೀಂ ಮೊರೆ ಹೋಗಿತ್ತು.
ಕೇಂದ್ರಕ್ಕೆ ತರಾಟೆ: ಹೈವೇ ಪಕ್ಕದ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನೂ ತರಾಟೆ ತೆಗೆದುಕೊಂಡಿದೆ. 10 ವರ್ಷಗಳಿಂದ ಸರ್ಕಾರ ಈ ಬಗ್ಗೆ ಭರವಸೆಗಳನ್ನು ಮಾತ್ರ ನೀಡುತ್ತಿದೆ. ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣ ಸುಪ್ರೀಂ ಮೆಟ್ಟಿಲೇರುವಂತಾಗಿದೆ ಎಂದು ಹರಿಹಾಯ್ದಿದೆ.
ಪಂಜಾಬ್ ಸರ್ಕಾರಕ್ಕೂ ಚಾಟಿ: ಹೆದ್ದಾರಿಗಳ ಪಕ್ಕದಲ್ಲಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ವಿಚಾರವನ್ನು ಪಂಜಾಬ್ ಸರ್ಕಾರ ಸಮರ್ಥಿಸಿಕೊಂಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಅಬಕಾರಿ ಲಾಬಿ ಹಾಗೂ ಆದಾಯ ಅಧಿಕವಾಗಿದ್ದಾಗ ರಾಜ್ಯ ಸರ್ಕಾರವೂ ಸಂತಸದಿಂದ ಇರುತ್ತದೆ. ಆದರೆ, ವ್ಯಕ್ತಿಯು ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬಕ್ಕೆ ಕೇವಲ 1.5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಸಾಮಾಜಿಕ ಕಳಕಳಿಯಿಂದ ನಿರ್ಧಾರ ತೆಗೆದುಕೊಳ್ಳಿ ಎಂದು ಪಂಜಾಬ್ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹೇಳಿದರು.

