ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಕಳೆದ ನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ಬೈಕನ್ನು ಕದ್ದು ಪರಾರಿಯಾಗಿ ಬಳಿಕ ಅದೇ ಬೈಕಿನಲ್ಲಿ ತಿರುಗಾಡುತ್ತಿದ್ದ ಕಳ್ಳನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.
ಆರೋಪಿಯನ್ನು ಗುಲ್ಬರ್ಗ ಜಿಲ್ಲೆ ದೇವಗಿರಿ ತಾಲ್ಲೂಕು ಆಲೂರು ನಿವಾಸಿ ಅಶೋಕ ಎಂಬವರ ಪುತ್ರ ಪ್ರಶಾಂತ ಯಾನೆ ಪರಶುರಾಮ(24) ಎಂದು ಗುರುತಿಸಲಾಗಿದೆ. ಈತನು ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಜೆಸಿಬಿ ಮತ್ತು ಹಿಟಾಚಿ ಚಾಲಕನಾಗಿ ದುಡಿಯುತ್ತಿದ್ದನು ಎನ್ನಲಾಗಿದೆ.
ಇದೇ ತಿಂಗಳ 10ರಂದು ಬೆಳಿಗ್ಗೆ ಎಂದಿನಂತೆ ಮಂಗಳೂರಿನ ಖಾಸಗಿ ಕಂಪೆನಿ ಕೆಲಸಕ್ಕೆ ಹೋಗುವ ವೇಳೆ ವಾಮದಪದವು ನಿವಾಸಿ ಶಿವಕುಮಾರ್ ಎಂಬವರು ರೂ 48ಸಾವಿರ ಮೌಲ್ಯದ ತನ್ನ ಬಜಾಜ್ ಪಲ್ಸರ್ ಬೈಕನ್ನು ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ನಿಲ್ಲಿದ್ದರು ಎನ್ನಲಾಗಿದೆ. ಅಂದು ಸಂಜೆ ಅವರು ಮತ್ತೆ ವಾಪಾಸು ಬಂದಾಗ ಬೈಕ್ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ದೂರಿಕೊಂಡಿದ್ದರು.
ಈ ಬಗ್ಗೆ ಡಿವೈಎಸ್ಪಿ ಸಿ.ಆರ್.ರವೀಶ್ ಮತ್ತು ಇನ್ಸ್ ಪೆಕ್ಟರ್ ಬಿ.ಕೆ.ಮಂಜಯ ನಿರ್ದೇಶನದಂತೆ ನಗರ ಠಾಣಾಧಿಕಾರಿ ನಂದ ಕುಮಾರ್, ಎಎಸೈ ಕೆ.ಸಂಜೀವ, ಅಪರಾಧ ವಿಭಾಗ ಠಾಣಾಧಿಕಾರಿ ಗಂಗಾಧರಪ್ಪ, ಸುರೇಶ, ಸದಾಶಿವ, ಅದ್ರಾಮ ಮತ್ತಿತರ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದರು. ಶುಕ್ರವಾರ ಬೆಳಿಗ್ಗೆ ಸ್ಥಳೀಯ ಭಂಡಾರಿಬೆಟ್ಟು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸಹಿತ ಸಿಕ್ಕಿ ಬಿದ್ದ ಕಳ್ಳನನ್ನು ಇಲ್ಲಿನ ಜೆಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

