ಮೂಡುಬಿದಿರೆ: ಹುಲ್ಲು ಮೇಯಲು ಕಟ್ಟಿ ಹಾಕಿದ್ದ ಕರುವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿಕೊಂದು ಹಾಕಿದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕರಿಂಜೆ ಹೊಸ ಒಕ್ಕಲು ಮನೆಯ ಅಣ್ಣಿ ಶೆಟ್ಟಿ ಎಂಬವರಿಗೆ ಸೇರಿದ ದನದ ಎರಡು ವರ್ಷದ ಕರುವನ್ನು ಶಿವಾನಂದ ಹೊಳ್ಳ ಎಂಬವರ ವರ್ಗದ ಜಾಗದಲ್ಲಿ ಬೆಳಿಗ್ಗೆ ಮೇಯಲು ಕಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಕರುವನ್ನು ಮನೆಗೆ ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ಕಟ್ಟಿದ್ದ ಜಾಗದಲ್ಲಿ ಕರು ಇರದಿದ್ದ ಕಾರಣ ದರ್ಖಾಸಿನಲ್ಲಿ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಕರು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಎದೆಯ ಭಾಗವನ್ನು ಚಿರತೆಯು ತಿಂದಿರುವುದು ಕಂಡು ಬಂದಿದೆ. ನಂತರ ಅಣ್ಣಿ ಶೆಟ್ಟಿ ಅವರು ಮನೆಗೆ ಹಿಂತಿರುಗಿದ್ದಾರೆ. ಆದರೆ ಮತ್ತೆ ಸ್ಥಳಕ್ಕೆ ತೆರಳಿ ನೋಡಿದಾಗ ಕರುವಿನ ಮೃತ ದೇಹವು ಮೊದಲಿದ್ದ ಸ್ಥಳದಲ್ಲಿರದೆ ಸ್ವಲ್ಪ ಮುಂದೆ ಎಳೆದುಕೊಂಡು ಹೋಗಿ ಹಾಕಿದ ಸ್ಥಿತಿಯಲ್ಲಿತ್ತು.

ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ಉಪವಲಯಾರಣ್ಯಾಧಿಕಾರಿಗಳಾದ ಚಂದ್ರಕಾಂತ ಪೋಳ, ಅನಿಲ್.ಕೆ, ಅರಣ್ಯ ರಕ್ಷಕ ಅಯ್ಯಣ್ಣ, ಮಿಥುನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿರುವುದರಿಂದ ಚಿರತೆಯೇ ದಾಳಿ ನಡೆಸಿ ಕೊಂದು ತಿಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

