ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಾಯತ್ರೆ ಸೆ. 11ರಂದು ನಡೆಯಲಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಪಾದಯಾತ್ರೆಯಲ್ಲಿ ತುಳುನಾಡಿನ ಸಾಧುಸಂತರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ನಡಿಗೆಯಲ್ಲಿ ವಿವಿಧ ದೇವಸ್ಥಾನ, ಭಜನಾಮಂಡಳಿ, ಸಂಘಸಂಸ್ಥೆ ಸೇರಿದಂತೆ ದ.ಕ.ಜಿಲ್ಲೆಯ ಕಟೀಲಿ ಶ್ರೀ ದೇವಿಯ ಭಕ್ತ ವೃಂದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜಾತಿ, ಪಕ್ಷ ಭೇದ ಮರೆತು ನಡೆಯುವ ಈ ಪಾದಯಾತ್ರೆಯಲ್ಲಿ ಯಾವುದೇ ಘೋಷಣೆಗೆ ಅವಕಾಶವಿಲ್ಲ, ಚೆಂಡೆ, ಶಂಖ, ಜಾಗಟೆಯ ಮೂಲ ಹರಿಕೀರ್ತನೆ ಮಾಡಿಕೊಂಡು ಕ್ಷೇತ್ರಕ್ಕೆ ತೆರಳುವುದಾಗಿ ತಿಳಿಸಿದ ಅವರು ಈ ಪಾದಯಾತ್ರೆಯ ಸಂದರ್ಭದಲ್ಲಿ ಮಧ್ಯೆ ಸೇರಿಕೊಳ್ಳಲು ಅವಕಾಶವಿದೆ ಎಂದರು. ಈ ದೇಶದ ಸಾರ್ವಭೌಮತ್ವ ಉಳಿಯಬೇಕಾದರೆ, ಭವಿಷ್ಯದಲ್ಲಿ ಯಾವುದೇ ಸಮುದಾಯದ ದೇವರುಗಳಿಗೆ ಈ ರೀತಿ ಅವಹೇಳನವನ್ನು ಯಾರು ಮಾಡಬಾರದು. ದ.ಕ.ಜಿಲ್ಲೆ ಶಾಂತಿಯ ಜಿಲ್ಲೆಯಾಗಿಯೇ ಉಳಿಯಬೇಕಾದರೆ ಸಮಸ್ತ ಹಿಂದೂ ಸಮಾಜ ಜಾಗೃತಗೊಳ್ಳಬೇಕು ಎಂದರು.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಭಕ್ತರು ಬೆಳಿಗ್ಗೆ 6.30ಕ್ಕೆ ಪೊಳಲಿ ಕ್ಷೇತ್ರದಲ್ಲಿ ಸೇರಿ ಅಲ್ಲಿ ಸಾಮೂಹಿಕ ಪ್ರಾರ್ಥನೆಗೈದು ಬಳಿಕ ಪಾದಯಾತ್ರೆ ಆರಂಭಗೊಳ್ಳಲಿದೆ. 10 ಗಂಟೆ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಿಂದ ಹೊರಡುವ ಪಾದಯಾತ್ರೆಯು ಸೇರಿಕೊಂಡು ಜೊತೆಯಾಗಿ ಕಟೀಲಿನತ್ತ ಸಾಗಲಿದೆ. ಈ ನಡುವೆ ಮುಂಜಾನೆ 6 ಗಂಟೆಗೆ ಬಿ.ಸಿ.ರೋಡಿನ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಿಂದ ತೆರಳಲಿರುವ ಪಾದಯಾತ್ರೆಯೂ ಪೊಳಲಿಯಲ್ಲಿ ಬೃಹತ್‍ಪಾದಯಾತ್ರೆಯ ಜೊತೆ ಸೇರಿಕೊಳ್ಳಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ತಿಳಿಸಿದರು. ಸಮಿಯಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿ ಕಟೀಲುದೇವಿಗೆ ಕೇವಲ ಜಿಲ್ಲೆ ಮಾತ್ರವಲ್ಲ ದೇಶ ವಿದೇಶದಲ್ಲೂ ಭಕ್ತರು ಇದ್ದಾರೆ, ಕಟೀಲು ದೇವಿಗೆ ಮಾಡಿರುವ ಅವಹೇಳನದಿಂದಾಗಿ ಸಮಸ್ತ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆಯಗಿದೆ. ಅನ್ಯ ಸಮುದಾಯದ ಹಲವಾರು ಮಂದಿ ಕೂಡ ಈ ವಿಚಾರದಲ್ಲಿ ನೊಂದುಕೊಂಡಿದ್ದು ಪಾದಾಯತ್ರೆಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರಲ್ಲದೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಸಮಿತಿಯ ಅಧ್ಯಕ್ಷ ರಾಜೇಶ್‍ನಾೈಕ್ ಉಳಿಪಾಡಿಗುತ್ತು ಮಾತನಾಡಿ ಆರೋಪಿಗೆ ದೇವಿಯೇ ಶಿಕ್ಷೆಯನ್ನು ನೀಡಬೇಕೆಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ, ಈ ಘಟನೆಗೆ ಸಂಬಂಧಿಸಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಸಂಪರ್ಕಿಸಿದ್ದು ಶೀಘ್ರವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ ರವಿರಾಜ್ ಬಿ.ಸಿ.ರೋಡು, ಬಜರಂಗದಳ ತಾಲೂಕು ಸಂಚಾಲಕ ಪ್ರದೀಪ್ ಅಜ್ಜಿಬೆಟ್ಟು ಹಾಜರಿದ್ದರು.
