ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಕ್ಷೇತ್ರದ ಅಮ್ಮನವರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿ, ನಿಂದನೆ ಮಾಡಿರುವ ವ್ಯಕ್ತಿಗಳ ಬಗ್ಗೆ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಭಾನುವಾರ ಬಿ.ಸಿ.ರೋಡಿನ ನವನೀತ ಶಿಶುಮಂದಿರದಲ್ಲಿ ನಡೆಯಿತು.

ಮಾಣಿಲ ಶ್ರೀಗಳು ಮಾತನಾಡಿ ಹಿಂದೂ ಸಮಾಜವನ್ನು ಧಮನಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತಗೊಳ್ಳಬೇಕಾಗಿದೆ. ಹಿಂದೂ ದೇವತೆಗಳನ್ನು ಅವಮಾನಿಸುವ ಕೆಲಸಗಳು ನಡೆಯುತ್ತಿದ್ದು ಈ ಬಗ್ಗೆ ಜಿಲ್ಲೆಯ ಜನರನ್ನು ಎಚ್ಚರಿಸುವ ಪ್ರಯತ್ನ ಆಗಬೇಕಿದೆ ಎಂದರು. ಜಿಲ್ಲೆಯ ಎಲ್ಲಾ ಸಾಧು ಸಂತರನ್ನು ಸೇರಿಸಿಕೊಂಡು ಪಕ್ಷ ಹಾಗೂ ಜಾತಿ ಭೇದ ಮರೆತು ಹಿಂದೂ ಸಮಾಜದ ದೇವಿ ಭಕ್ತರೆಲ್ಲಾ ಸೇರಿಕೊಂಡು ಕಟೀಲು ಕ್ಷೇತ್ರಕ್ಕೆ ಪಾದಾಯಾತ್ರೆ ಕೈಗೊಳ್ಳಬೇಕು ಎಂದರು.
ಈ ಬಗ್ಗೆ ಜನಾಗೃತಿ ಮೂಡಿಸುವ ಅಮ್ಮನೆಡೆ ನಮ್ಮ ನಡೆ ಪಾದಾಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಚರ್ಚೆಸಿ ಶ್ರೀ ಮೋಹನದಾಸ ಸ್ವಾಮೀಜಿಯವರ ಗೌರವ ಮಾರ್ಗದರ್ಶನದಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆ ಹಾಗೂ ಸತ್ಯಜಿತ್ ಸುರತ್ಕಲ್ ಅವರ ಪ್ರಧಾನಕಾರ್ಯದರ್ಶಿಯಾಗಿರುವ ಸಮಿತಿಯೊಂದನ್ನು ರಚಿಸಲಾಯಿತು. ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಶ್ರೀ ದೇವಿಯ ಭಕ್ತರನ್ನು ಸೇರಿಸಿಕೊಂಡು ಸೆ.11ರಂದು ಬಜ್ಪೆ ಸುಂಕದಕಟ್ಟೆಯಿಂದ ಕಟೀಲು ಕ್ಷೇತ್ರದವರೆಗೆ ಪಾದಾಯಾತ್ರೆ ಕೈಗೊಂಡು ಕ್ಷೇತ್ರದಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು. ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಮುಖರಾದ ರಾಜೇಶ್ನಾೈಕ್ ಉಳಿಪಾಡಿಗುತ್ತು, ಸತ್ಯಜಿತ್ ಸುರತ್ಕಲ್, ಪ್ರಸಾದ್ ಕುಮಾರ್, ರಾಧಕೃಷ್ಣ ಅಡ್ಯಂತಾಯ, ಮಚ್ಚೇಂದ್ರ ಸಾಲ್ಯಾನ್, ರಾಮದಾಸ ಬಂಟ್ವಾಳ, ರವಿರಾಜ್ ಬಿ.ಸಿ.ರೋಡು, ಕೃಷ್ಣಪ್ಪ ಪೂಜಾರಿ ದೋಟ, ರತ್ನಾಕರ ಶೆಟ್ಟಿ ಮತ್ತಿತರರು ಹಾಜರಿದ್ದರು.
