ಮೂಡುಬಿದಿರೆ : ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ವ್ಯಕ್ತಿಯನ್ನು ಮೂಡುಬಿದಿರೆ ಅಗ್ನಿಶಾಮಕ ಸಿಬಂದಿ ಬಾವಿಗಿಳಿದು ಹರಸಾಹಸದಿಂದ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಕಡಂದಲೆಯಲ್ಲಿ ಮಂಗಳವಾರ ನಡೆದಿದೆ. ಕಡಂದಲೆ ಬಿ.ಟಿ ರೋಡ್‍ನ ಕಿಲೆಂಬಿ ದರ್ಖಾಸು ರುಕ್ಕಯ್ಯ ಪೂಜಾರಿ ಅವರ ಪುತ್ರ ಪುರುಷೋತ್ತಮ (42ವ) ಎಂಬವರು ತಮ್ಮ ಮನೆಯ ಬಳಿ ಇದ್ದ 40 ಅಡಿ ಆಳದ 20-25 ಅಡಿ ನೀರಿದ್ದ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತಕ್ಷಣ ಮನೆಯವರು ಮತ್ತು ಪರಿಸರದ ಜನರು ಸೇರಿ ಪುರುಷೋತ್ತಮ್ ಅವರನ್ನು ಮೇಲಕ್ಕೆತ್ತಲು ಬಾವಿಗೆ ಹಗ್ಗವನ್ನು ಇಳಿಸಿ ಯತ್ನಿಸಿದ್ದರು. ಆದರೆ ಸ್ವಲ್ಪ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದ ಅವರು ಮೇಲಕ್ಕೆ ಬರಲು ಒಪ್ಪುತ್ತಿರಲಿಲ್ಲ. ನಂತರ ಮೂಡುಬಿದಿರೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಸ್ಥಳಕ್ಕೆ ಧಾವಿಸಿತ್ತು.

ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಸಿಬಂದಿ ಮನೋಹರ ಅವರು ಬಾವಿಗಿಳಿದು ಮೇಲಕ್ಕೆತ್ತಲು ಯತ್ನಿಸಿದಾಗ ಬಾವಿಯಲ್ಲೇ ಸಿಬಂದಿಗೆ ಹೊಡೆದಿದ್ದಾರೆ ಅಲ್ಲದೆ ಮೇಲಕ್ಕೆ ಬರಲು ಒಪ್ಪದೆ ಈಜಲು ಬರುತ್ತಿದ್ದ ಆತ ಬಾವಿಯ ನೀರಿನಲ್ಲೇ ಉಳಿದುಕೊಳ್ಳಲು ಯತ್ನಿಸಿದ್ದಾರೆ ನಂತರ ಇನ್ನಿಬ್ಬರು ಅಗ್ನಿಶಾಮಕ ಸಿಬಂದಿಗಳಾದ ಸತೀಶ್ ಮತ್ತು ಕೃಷ್ಣ ನಾಯ್ಕ್ ಅವರ ಸಹಕಾರದಿಂದ ಮನೋಹರ ಅವರು ಹರಸಾಹಸದಿಂದ ಹಗ್ಗದ ಮೂಲಕ ವ್ಯಕ್ತಿಯನ್ನು ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪುರುಷೋತ್ತಮ್ ಅವರು ಬಾವಿಯಿಂದ ಮೇಲಕ್ಕೆ ಬಂದ ಮೇಲೂ ತನ್ನನ್ನು ಯಾಕೆ ಬಾವಿಯಿಂದ ಮೇಲಕ್ಕೆತ್ತಿದ್ದಾರೆಂದು ಬೈದು ಮತ್ತೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದ್ದಾರೆ.
ಸ್ಥಳಕ್ಕೆ ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಪ್ರವೀಣ್, ಸಿಬಂದಿಗಳಾದ ಕೇಶವ ಮತ್ತು ಕುಮಾರ್ ಈ ಸಂದರ್ಭದಲ್ಲಿದ್ದರು. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By Suddi9

Leave a Reply

Your email address will not be published. Required fields are marked *