ಮುಂಬಯಿ : ಶ್ರೀ ದುರ್ಮುಖನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ದಿನವಾದ ಇಂದು ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆಯಿಂದ ನಾಗರ ಪಂಚಮಿ ಸಂಭ್ರಮೋಲ್ಲಾಸದಿಂದ ಆಚರಿಸಲ್ಪಟ್ಟಿತು.ಚೆಂಬೂರು ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಧಾರ್ಮಿಕ ವಿಧಿಗಳೊಂದಿ ಗೆ ನಾಗರಪಂಚಮಿಯನ್ನು ಆಚರಿಸಲಾಗಿದ್ದು, ಮಠದ ಶ್ರೀಪ್ರಸಾದ್ ಭಟ್, ವಿಷ್ಣು ಕಾರಂತ್, ನಾರವಿ ಗುರುರಾಜ್ ಭಟ್, ಶ್ರೀಧರ್ ಭಟ್, ಕೃಷ್ಣರಾಜ್ ಉಪಾಧ್ಯಾಯ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ಬೆಳಿಗ್ಗೆಯಿಂದ ನೂರಾರು ಭಕ್ತಾಧಿಗಳು ಮಠಕ್ಕಾಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದರು. ಮುಂಜಾನೆಯಿಂದ ಪವಮಾನ ಹೋಮ, ಅಭಿಷೇಕ, ಸಂತಾನ, ಆರೋಗ್ಯ, ಸಂಪತ್ತು ಪ್ರಾಪ್ತಿಗಾಗಿ ಸಾಮೂಹಿಕ ಆಶ್ಲೇಷಾ ಬಲಿ, ನವಕ ಪ್ರಧಾನ ಕಲಶ, ಸರ್ಪಕೋಪ, ಸರ್ಪಶಾಪ ಪರಿಹಾರರ್ಥ ಸರ್ಪತ್ರಯ ಮಂತ್ರ ಹೋಮ, ಮಹಾಭಿಷೇಕ, ಅಲಂಕಾರ, ಮಹಾಪೂಜೆ, ಸರ್ವ ಐಶ್ವರ್ಯ ಸಿದ್ಧಿಗಾಗಿ ಅಷ್ಟಕುಲ ನಾಗಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆ ಮೊದಲಾದ ಸಾಂಸ್ಕೃತಿಕ ವಿಧಿ ವಿಧಾನಗಳನ್ನು ವೈಧಿಕವಾಗಿ ನೇರವೇರಿಸಲಾಗಿತ್ತು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್


