ಬಂಟ್ವಾಳ:ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೊಂದು ವಾರ್ಡ್ ಸಭೆಗಳಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ತೆರಿಗೆ ಇಳಿಕೆ ಬಗ್ಗೆ ಕೂಡಲೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಿನಲ್ಲಿ ಅವಕಾಶ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಭರವಸೆ ನೀಡಿದ್ದಾರೆ. ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿನ ಬೋಳಂತೂರು ಎಂಬಲ್ಲಿ ಕಲುಷಿತ ಕುಡಿಯುವ ನೀರಿನ ಬದಲಾಗಿ ಮುಂದಿನ ಒಂದು ವಾರದೊಳಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಭೆಯಲ್ಲಿ ನಿರ್ಧರಿಸಲಾಯಿತು.

4btl-Gramasabhe

ಇನ್ನೊಂದೆಡೆ ಕಳೆದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕರ್ಬೆಟ್ಟು-ಬೋಳಂತೂರು-ನಾಟಿ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಮುಂದಿನ ಡಿಸೆಂಬರ್ ತಿಂಗಳಿನಿಂದ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಭರವಸೆ ನೀಡಿದ್ದಾರೆ ಎಂದು ನೋಡೆಲ್ ಅಧಿಕಾರಿ ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಬಾಬು ಇವರು ಸಭೆಗೆ ತಿಳಿಸಿದರು. ಇಲ್ಲಿನ ಒಳಚರಂಡಿ ಮತ್ತು ದಾರಿದೀಪ ಅಳವಡಿಕೆ ಬಗ್ಗೆ ಪಂಚಾಯಿತಿ ವತಿಯಿಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪಂಚಾಯಿತಿ ಅಧ್ಯಕ್ಷರು ಭರವಸೆ ನೀಡಿದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮಾತನಾಡಿ, 2016-17ನೇ ಸಾಲಿನ ಅನುದಾನದಲ್ಲಿ ನರಿಕೊಂಬು ಗ್ರಾಮದ ಏಲಬೆ ದಿಂಡಿಕೆರೆ ಪರಿಸರದಲ್ಲಿ ರೂ 1.34ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಮತ್ತು ವಿದ್ಯುತ್ತೀಕರಣ, ತಾರಿಪಡ್ಪು-ಹಿತ್ಲಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ರೂ 1ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ ರಚನೆ, ಪುತ್ರೋಟಿಬೈಲು ವಿದ್ಯಾನಗರ ಎಂಬಲ್ಲಿ ರೂ 1ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ರಸ್ತೆ, ರೂ 55ಸಾವಿರ ವೆಚ್ಚದಲ್ಲಿ ಬೋಳಂತೂರು ಅಂಗನವಾಡಿ ಕಟ್ಟಡ ವಿಸ್ತರಣೆ, ರೂ 30ಸಾವಿರ ವೆಚ್ಚದಲ್ಲಿ ಶಂಭೂರು ಕುಂದಾಯಗೋಳಿ ಅಂಗನವಾಡಿ ಕೇಂದ್ರ ಬಳಿ ತಡೆಗೋಡೆ ರಚನೆಗೆ ಅನುದಾನ ಮೀಸಲಿಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಾಲಾಕ್ಷಿ ಪೂಜಾರಿ ಇವರ ಅನುದಾನದಲ್ಲಿ ಸ್ಥಳೀಯ ನಾಯಿಲ ಬೋರುಗುಡ್ಡೆ ಎಂಬಲ್ಲಿ ರೂ 2ಲಕ್ಷ ವೆಚ್ಚದಲ್ಲಿ ಕಾಲ್ಸೇತುವೆ ನಿರ್ಮಿಸಲು ಅನುದಾನ ಮೀಸಲಿಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಜಗದೀಶ್ ಸಭೆಗೆ ತಿಳಿಸಿದರು.ಇಲ್ಲಿನ ಕೊಂಗಲ್ಪಾದೆ ಕಾಂಕ್ರೀಟು ಮಿಶ್ರಣ ಘಟಕದ ಘನ ವಾಹನ ಸಂಚಾರದಿಂದ ಗ್ರಾಮೀಣ ರಸ್ತೆಗಳು ಕೆಟ್ಟು ಹೋಗುತ್ತಿದೆ ಎಂಬ ಸ್ಥಳೀಯರ ಆರೋಪಕ್ಕೆ ಸ್ಪಂದಿಸಿ, ಅವರಿಗೆ ನೀಡಿರುವ ನಿರಕ್ಷೇಪನಾ ಪತ್ರ ಮತ್ತು ಪರವಾನಿಗೆ ರದ್ದುಗೊಳಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇಲ್ಲಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಅನುಕೂಲವಾಗುವಂತೆ ಪಾಣೆಮಂಗಳೂರು-ಶಂಭೂರು-ದಾಸಕೋಡಿ ರಸ್ತೆ ಮೇಲ್ದರ್ಜೆಗೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು. ನರಿಕೊಂಬು ಮತ್ತು ಶಂಭೂರು ಗ್ರಾಮವನ್ನು ‘ಪೋಡಿಮುಕ್ತ’ ಗ್ರಾಮವನ್ನಾಗಿ ಘೋಷಿಸಲು ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ ಪೂಜಾರಿ, ಪಿಡಿಒ ಗಿರಿಜಾ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.

By Suddi9

Leave a Reply

Your email address will not be published. Required fields are marked *