ಮೂಡುಬಿದರೆ: ರಾಮಾಯಾಣ ಮತ್ತು ಮಹಾಭಾರತಗಳಲ್ಲಿ ಎಲ್ಲಾ ಕಾಲಕ್ಕೂ ಸಲ್ಲುವ ಕಥಾ ಸಾಂದ್ರತೆಯಿದೆ. ಸಾಮಾನ್ಯದಿಂದ ಹಿಡಿದು ವಿದ್ವತ್ ಜನರಿಗೆ ಪ್ರಿಯವಾಗುವ ಸತ್ತ್ವ ಈ ಮಹಾಕಾವ್ಯಗಳಲ್ಲಿ ಇದೆ. ಈ ಕಾವ್ಯಗಳ ಮೇಲೆ ಸೃಷ್ಟಿಯಾಗಿರುವ ಸಾಹಿತ್ಯ ವೈವಿಧ್ಯ, ವ್ಯಾಖ್ಯಾನ, ಭಾಷ್ಯ, ಸಂಶೋಧನೆ ಅಪಾರವಾದುದು. ಮಹಾಕಾವ್ಯಗಳು ಬಗೆದಷ್ಟು ಬತ್ತದ ಕಾವ್ಯ ಕಣಜವಾಗಿವೆ’ ಎಂದು ಮೂಡುಬಿದರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ನಡೆದ ರಾಮಾಯಣ- ಮಹಾಭಾರತ ಪರೀಕ್ಷೆಯ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ವಿನಾಯಕ ಭಟ್ ಪ್ರಸ್ತಾವನೆಗೈದರು. ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕಿ ಲೀಲಾವತಿ ಬಾಯಿ ವಿಜೇತರ ವಿವರ ನೀಡಿದರು. ಪ್ರಥಮ ಬಿಬಿಎಂ ವಿದ್ಯಾರ್ಥಿ ಸುಜನಕುಮಾರ ನಿರೂಪಿಸಿದರು. ಸಂಸ್ಕೃತ ಉಪನ್ಯಾಸಕ ರಜನೀಶ್ ವಂದಿಸಿದರು.
