ಗೂಡ್ಸ್ ರೈಲು ಬೋಗಿ ಸಹಿತ 300 ಮೆಟ್ರಿಕ್ ಟನ್ ಅಕ್ರಮ ಮರಳು ವಶಕ್ಕೆ
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ರೈಲಿನ ಮೂಲಕ ರೈಲ್ವೆ ಕಾಮಗಾರಿ ನೆಪದಲ್ಲಿ ಸಕಲೇಶಪುರಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 300 ಮೆಟ್ರಿಕ್ ಟನ್ ತೂಕದ ಮರಳು ಮತ್ತು ಆರು ರೈಲು ಬೋಗಿ ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಇಲ್ಲಿನ ರೈಲ್ವೆ ನಿಲ್ದಾಣ ಬಳಿ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಮರಳನ್ನು ಗೂಡ್ಸ್ ರೈಲಿನ ಆರು ಬೋಗಿಗಳಿಗೆ ಬುಧವಾರ ಬೆಳಿಗ್ಗೆ ಕಾರ್ಮಿಕರು ತುಂಬಿಸುತ್ತಿದ್ದ ವೇಳೆ ಸಾರ್ವಜನಿಕರು ನೀಡಿದ ಮಾಹಿತಿ ಆಧಾರದಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂವಿಜ್ಞಾನಿ ಗಿರೀಶ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡವು ತಕ್ಷಣವೇ ಧಾವಿಸಿ ಬಂದು ಮರಳು ವಶಕ್ಕೆ ಪಡೆದುಕೊಂಡಿದೆ. ಈ ಮರಳು ಸಂಗ್ರಹ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ರೂ 18ಸಾವಿರ ಮೊತ್ತದ ರಾಯಧನ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾರೂ ಪರವಾನಿಗೆ ಪಡೆದುಕೊಂಡಿಲ್ಲ.

ಈ ಬಗ್ಗೆ ರೈಲ್ವೆ ಸ್ಟೇಶನ್ ಮಾಸ್ಟರ್ ಬಾಲಕೃಷ್ಣ ಅವರನ್ನು ಅಧಿಕಾರಿಗಳು ವಿಚಾರಿಸಿದಾಗ ಇದರ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಅವರು ಉತ್ತರಿಸಿದ್ದಾರೆ. ತಕ್ಷಣವೇ ಸಕಲೇಶಪುರ ರೈಲ್ವೆ ಇಲಾಖೆ ವಿಭಾಗೀಯ ಸಹಾಯಕ ಎಂಜಿನಿಯರ್ ಗೋಪ ಕುಮಾರ್ ಅವರನ್ನು ಸಂಪರ್ಕಿಸಿದಾಗಲೂ ಅಲ್ಲಿ ಕೈಗೊಂಡಿರುವ ಕಾಮಗಾರಿ ಮತ್ತು ಗುತ್ತಿಗೆದಾರರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಇದಕ್ಕಾಗಿ ಅವರನ್ನು ಬಿ.ಸಿ.ರೋಡಿಗೆ ಕರೆಸಲಾಗಿದ್ದು, ಸಮರ್ಪಕ ತನಿಖೆ ನಡೆಯುವತನಕ ಆರು ರೈಲು ಬೋಗಿ ಮತ್ತು ಅಂದಾಜು ಮಾರುಕಟ್ಟೆ ಧಾರಣೆ ಒಟ್ಟು ರೂ 1.5ಲಕ್ಷ ಮೌಲ್ಯದ 300 ಮೆಟ್ರಿಕ್ ಟನ್ ತೂಕದ ಮರಳಿನ ಬಗ್ಗೆ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದು ಭೂವಿಜ್ಞಾನಿ ಗಿರೀಶ್ ಮೋಹನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಇಲಾಖೆ ಕಿರಿಯ ಎಂಜಿನಿಯರ್ ಮಹಾದೇವಪ್ಪ, ಕೇಶವಮೂರ್ತಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
—

