ಬಂಟ್ವಾಳ : ತಾಲೂಕಿನ ಪ್ರಮುಖ ಪಟ್ಟಣ ಬಿ ಸಿ ರೋಡು ಪೇಟೆಯಲ್ಲಿ ತಾಂಡವವಾಡುತ್ತಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ನಾಯಕರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಲಿಖಿತವಾಗಿ ದೂರಿಕೊಂಡಿದ್ದು, ಶೀಘ್ರ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 73 (ಮಂಗಳೂರು-ಹಾಸನ-ಬೆಂಗಳೂರು) ರಲ್ಲಿ ನಡೆದ ಚತುಷ್ಪಥ ಕಾಮಗಾರಿಯ ವೇಳೆ ಬಿ ಸಿ ರೋಡು ಪೇಟೆಯಲ್ಲಿ ಫ್ಲೈ ಓವರ್ ನಿರ್ಮಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಫ್ಲೈ ಓವರ್ ಮೇಲ್ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ, ಅಲ್ಲೇ ಸಂಗ್ರಹವಾಗುತ್ತಿದೆ. ಇದರಿಂದ ಫ್ಲೈ ಓವರ್ ಮೇಲ್ಭಾಗದಲ್ಲಿ ವಾಹನ ಸಂಚಾರದ ವೇಳೆ ಕೆಳಗಿನ ಮುಖ್ಯ ರಸ್ತೆಯಲ್ಲಿ ತೆರಳುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರ ಮೇಲೆ ನೀರಿನ ಅಭಿಷೇಕ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆಗುತ್ತಲೇ ಇದೆ. ಇದರಿಂದ ಇಲ್ಲಿ ಅಪಘಾತಗಳು ಹಾಗೂ ಸಾವು-ನೋವುಗಳಿಗೆ ಕಾರಣವಾಗುತ್ತಿದೆ.

3 (1)

1 (1)

2 (2)
ಅಲ್ಲದೆ ಫ್ಲೈ ಓವರ್ ಬದಿಯಲ್ಲಿ ನಿರ್ಮಾಣಗೊಂಡಿರುವ ಸರ್ವೆಸ್ ರಸ್ತೆ ಕೂಡಾ ಹೆದ್ದಾರಿ ನಿಯಮಕ್ಕೆ ಬದ್ದವಾಗಿ ನಿರ್ಮಾಣಗೊಳ್ಳದೆ ತೀರಾ ಅಗಲ ಕಿರಿದಾದ ಸ್ಥಿತಿಯಲ್ಲಿದೆ. ಇದರಿಂದಾಗಿ ಪೇಟೆಯಲ್ಲಿ ನಿತ್ಯ ನಿರಂತರ ಟ್ರಾಫಿಕ್ ಅವ್ಯವಸ್ಥೆಗೆ ಕಾರಣವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 234 (ಮಂಗಳೂರು-ವಿಲ್ಲುಪುರಂ) ರ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಜಿಲ್ಲಾಡಳಿತ ವತಿಯಿಂದ ಸ್ವಚ್ಛ ಬಂಟ್ವಾಳ ಪರಿಕಲ್ಪನೆಯಡಿ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರೀ ಪಾರ್ಕ್  ನಿರ್ಮಾಣ ಮಾಡುತ್ತಿದೆ. ಆದರೆ ಇನ್ನೇನು ಕೆಲವೇ ಸಮಯಗಳಲ್ಲಿ ಈ ಹೆದ್ದಾರಿಯ ರಸ್ತೆಗಳ ಅಗಲೀಕರಣವೂ ಪ್ರಾರಂಭವಾಗಲಿದ್ದು, ಈ ವೇಳೆ ಈ ಪಾರ್ಕ್ ನೆಲಸಮಗೊಳ್ಳುವ ಸಾಧ್ಯತೆ ಇದೆ. ಹೀಗಾದಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲಾಗಲಿದೆ. ಅಲ್ಲದೆ ಈ ಟ್ರೀ ಪಾರ್ಕ್ ನಿರ್ಮಾಣಕ್ಕೆ ಇದುವರೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಯಾವುದೇ ನಿರಾಕ್ಷೇಪಣೆಯನ್ನು ಪಡೆದಿಲ್ಲ.
ಅಲ್ಲದೆ ಬಿ ಸಿ ರೋಡು-ಬಂಟ್ವಾಳ ಸಂಪರ್ಕದ ಹೆದ್ದಾರಿ ಹಾಗೂ ಪಿಡಬ್ಲ್ಯುಡಿ ರಸ್ತೆಯ ಎರಡು ಕಡೆಗಳಲ್ಲಿ ನಿಯಮ ಮೀರಿ ಅಂದರೆ 50 ಮೀಟರ್ ಒಳಗಡೆ ರಸ್ತೆ ಉಬ್ಬುಗಳನ್ನು ನಿರ್ಮಿ ಸಲಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಹಲವು ಅವಘಡಗಳಿಗೆ ಕಾರಣವಾಗುತ್ತಿದೆ. ಈ ರಸ್ತೆ ಉಬ್ಬು ನಿರ್ಮಾಣವು ಸುಪ್ರೀಂ  ಕೋರ್ಟ್ ನಿರ್ದೆಶನದ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ.
ಬಿ ಸಿ ರೋಡು-ಸುರತ್ಕಲ್ ಚತುಷ್ಪಥ ಹೆದ್ದಾರಿ ಕಾಮಗಾರಿಯು ಬಿ ಸಿ ರೋಡು ಪೇಟೆಯಲ್ಲಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ. ಸರ್ವೆಸ್ ರಸ್ತೆಯ ಇಕ್ಕಟ್ಟು ಸಹಿತ ಪೇಟೆಯಲ್ಲಿ ಸಾರ್ವಜನಿಕರು ಹೆದ್ದಾರಿ ದಾಟಲು ಎಲ್ಲಿಯೂ ಝೀಬ್ರಾ ಗುರುತು ಹಾಕಿಲ್ಲ. ರಸ್ತೆಯ ಎರಡೂ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇನ್ನೂ ಸಮಪರ್ಕವಾಗಿ ನಿರ್ಮಾಣಗೊಂಡಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಬಹಳಷ್ಟು ತ್ರಾಸದಾಯಕ ಪರಿಸ್ಥಿತಿ ನಿಮರ್ಾಣವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಬಿಜೆಪಿ ಮುಖಂಡರು ತಮ್ಮದೇ ಪಕ್ಷದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಅನಧಿಕೃತ ಹೋಡಿಂಗ್ ವಿರುದ್ದ ಪ್ರಧಾನಿಗೆ ದೂರು
ಈ ಮಧ್ಯೆ ಬಿ ಸಿ ರೋಡು ಮುಖ್ಯ ವೃತ್ತ ಸೇರಿದಂತೆ ಪೇಟೆಯಾದ್ಯಂತ ಅನಧಿಕೃತ  ಬ್ಯಾನರ್, ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದು, ರಸ್ತೆ ಸುರಕ್ಷತೆಗೆ ಇದು ಸವಾಲಾಗಿದೆ. ಈ ನಿಟ್ಟಿನಲ್ಲಿ ಇದೆಲ್ಲವನ್ನೂ ತೆರವುಗೊಳಿಸಲು ಸ್ಥಳೀಯಾಡಳಿತಕ್ಕೆ ಆದೇಶ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ಬಂಟ್ವಾಳ ಪುರಸಭಾ ವಿಪಕ್ಷ ಸದಸ್ಯ ಬಿ ದೇವದಾಸ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಖಿತ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 73 ಹಾಗೂ 234 ರ ಎಲ್ಲೆಂದರಲ್ಲಿ ಖಾಸಗಿ ಸಂಸ್ಥೆಗಳ ಆದಾಯದ ಮೂಲವಾಗಿ ಬೃಹತ್ ಪ್ರಮಾಣದಲ್ಲಿ ಹೋಡಿಂಗ್ಸ್, ಕಟೌಟ್, ಬ್ಯಾನರ್ ಹಾಗೂ ಬಂಟಿಂಗ್ಸ್ಗಳು ರಾರಾಜಿಸುತ್ತಿದೆ. ಇವುಗಳನ್ನು ಅಳವಡಿಸಲು ಜಾಹೀರಾತು ಕಂಪೆನಿಗಳು ಅಥವಾ ಕಾರ್ಯಕ್ರಮ ಆಯೋಜಕರು ಯಾವುದೇ ರಾಷ್ಟ್ರೀಯ ಹೆದ್ದಾರಿ ಅಥವಾ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆದಿರುವುದಿಲ್ಲ ಎಂದು ಪ್ರಧಾನಿ ಅವರ ಗಮನ ಸೆಳೆದಿರುವ ದೇವದಾಸ್  ಶೆಟ್ಟಿ ಇಂತಹ ರಸ್ತೆ ಸುರಕ್ಷತಾ ನಿಯಮಕ್ಕೆ ಸವಾಲಾಗಿರುವ ಹೋಡಿಂಗ್ಗಳನ್ನು ತಕ್ಷಣ ತೆರವುಗೊಳಿಸಲು ಸಂಬಂಧಪಟ್ಟವರ ಮುಖಾಂತರ ಆದೇಶ ಕೊಡಿಸುವಂತೆ ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *