ನಾರಾಯಣ ಗುರುವಿನ ಕ್ರಾಂತಿಯಿಂದ ಕೇರಳದಲ್ಲಿ ಇಂದಿಗೂ ಹಿಂದೂ ಸಮಾಜ ಉಳಿದಿದೆ : ನಳಿನ್
ಮಂಗಳೂರು : ಇಂದು ಕೇರಳದಲ್ಲಿ ಹಿಂದೂ ಸಮಾಜ ಉಳಿದಿದ್ದೇಯಾದರೆ ಅದಕ್ಕೆ ನಾರಾಯಣ ಗುರು ಮಾಡಿರುವ ಸಾಮಾಜಿಕ ಕ್ರಾಂತಿಯೇ ಕಾರಣ. ನಾರಾಯಣ ಗುರು ಸಮಾಜದಲ್ಲಿ ಸ್ವಾಭಿಮಾನದ ಬದುಕಿನೊಂದಿಗೆ ಸಂಸ್ಕ್ರ ತಿ-ಸಂಸ್ಕಾರ, ಶಿಕ್ಷಣಕ್ಕೆ ಮಹತ್ವ ನೀಡುವುದರೊಂದಿಗೆ ಭಗವಂತನನ್ನು ಕಾಣಬಹುದು ಎಂದು ಸಾರಿದವರು. ವ್ಯಕ್ತಿತ್ವ ರೂಪಿಸುವಲ್ಲಿ ಭಗವಂತನಿಗಿಂತಲೂ ಗುರುವಿನ ಪಾತ್ರ ದೊಡ್ಡದು. ನಾರಾಯಣ ಗುರು ರಾಷ್ಟ್ರಕ್ಕೆ ಅಬ್ಧುತ ಚಿಂತನೆ ನೀಡಿ, ಪರಿವರ್ತನೆಗೆ ಕಾರಣರಾದವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಗುರುಪುರ-ಗುರುನಗರದ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಸಮಾಜದ 55ನೇ ವಾರ್ಷಿಕೋತ್ಸವ ಹಾಗೂ ಗುರುಪೂಜೆಯಂಗವಾಗಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂಘದ ಯೋಜನೆಯಾದ ಸಭಾ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನ ತೆಗೆಸಿಕೊಡುವುದಾಗಿ ಭರವಸೆ ನೀಡಿದರು.
ಸಮಾಜಕ್ಕೆ ಗುರು ಸಂದೇಶ ಅನನ್ಯ. ಬಿಲ್ಲವ ಸಮಾಜದ ಸಾಧನೆ ಅಭಿನಂದನೀಯ ಎಂದು ಮುಖ್ಯ ಅಥಿತಿಯಾಗಿ ಮಾತನಾಡಿದ ಗುರುಪುರ ಗ್ರಾ ಪಂ ಉಪಾಧ್ಯಕ್ಷ ಉದಯ ಭಟ್ ಹೇಳಿದರೆ, ಗತ ಮರೆತರೆ ಸಾಧನೆ ಅಸಾಧ್ಯ. ಇದು ಭಜನೆಯ ಕೇಂದ್ರವಲ್ಲ, ದೇವ ಮಂದಿರವಾಗಿದೆ ಎಂದು ವಕೀಲೆ ದೇವನಂದಿನಿ ಮಾರ್ಲ ಜೈನ್ ವಿಚಾರಧಾರೆ ಹರಿಸಿದರು.
ಸಮಾಜದಲ್ಲಿ ಒಂದು ಸಮುದಾಯ ಮೇಲ್ವರ್ಗದವರ ತುಳಿತಕ್ಕೊಳಗಾಗಿದ್ದ ಕಾಲಘಟ್ಟದಲ್ಲಿ ನಾರಾಯಣ ಗುರು ಆ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಶಿಕ್ಷಣದ ಮಹತ್ವ ಸಾರಿದ್ದರು ಎಂದು ಕಟ್ಟಡ ಗುತ್ತಿಗೆದಾರ ಲೋಕೇಶ್ ಪೂಜಾರಿ ಬಜ್ಪೆ ಹೇಳಿದರು.
ಸಂಘಟನೆ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಭಿನ್ನಾಭಿಪ್ರಾಯದಿಂದ ಸಂಘಟನೆ ವಿಘಟನೆಯಾಗಬಾರದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆ ಉನ್ನತ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಸಂಸ್ಕ್ರತಿ ಜಾಗೃತಿಗೊಳಿಸುವಲ್ಲಿ ತಾಯಿಯಷ್ಟೇ ತಂದೆಯ ಪಾತ್ರವೂ ಇದೆ ಎಂದು ನಿವೃತ್ತ ಶಿಕ್ಷಕಿ ರೋಹಿಣಿ ಸಲಹೆ ನೀಡಿದರು.
ರಾಜ್ಯದಲ್ಲಿ ಬಿಲ್ಲವ ಮತ್ತು ಇದಕ್ಕೆ ಸೇರಿದ ಜಾತಿಯವರ ಬಲ ಐದು ಅಥವಾ 6ನೇ ಸ್ಥಾನದಲ್ಲಿದ್ದರೂ ನಮ್ಮ ಸಂಘಟನೆ ಬಲ ಮಾತ್ರ, ಲಿಂಗಾಯತ ಅಥವಾ ಗೌಡ ಸಮುದಾಯದಂತೆ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಬಿಲ್ಲವರು ಈಗ ನಿಜವಾದ ಉದ್ದೇಶದಡಿ ಸಮಾಜ ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆದಾಗಲೇ ಸಮಾಜ ಉನ್ನತೀಕರಣವಾಗುವುದು. ಅಂತಹ ಮನೋಭಾವದೊಂದಿಗೆ ನಮ್ಮ ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಎಂದು ಎಂಎಲ್‍ಸಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಜ್ಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ನಾರಾಯಣ ನಿರಂಜನ ಪೂಜಾರಿ ಅಧ್ಯಕ್ಷೆ ವಹಿಸಿದ್ದು, ವೇದಿಕೆಯಲ್ಲಿ ಶಾಸಕ ಮೈದಿನ್ ಬಾವಾರ ಸಹೋದರ ಮುಮ್ತಾಝ್ ಅಲಿ, ಸ್ಫೂರ್ತಿ ಸಂಘದ ಅಧ್ಯಕ್ಷೆ ವಿನೋದ ಡಿ ಅಂಚನ್ ಮೊದಲಾದವರು ಇದ್ದರು. ಮಹಾಬಲ ಅಮೀನ್ ಧನ್ಯವಾದ ಸಮರ್ಪಿಸಿದರು. ತಿಲಕ್‍ರಾಜ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

