ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪನಡು ಜಂಕ್ಷನ್ ಎಂಬಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಬದ್ರುದ್ದೀನ್ ಎಂಬಾತನು ವರದಕ್ಷಿಣೆಗಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಈತನ ಪತ್ನಿಯೇ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ ಘಟನೆ ನಡೆದಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ದೇರಳಕಟ್ಟೆ ಸಮೀಪದ ಯುವತಿಯನ್ನು ವಿವಾಹವಾಗಿದ್ದ ಬದ್ರುದ್ದೀನ್ ವರದಕ್ಷಿಣೆ ರೂಪದಲ್ಲಿ ಒಟ್ಟು 100 ಪವನ್ ಚಿನ್ನಾಭರಣ ಮತ್ತು ರೂ 10 ಲಕ್ಷ ಮೊತ್ತದ ನಗದು ಪಡೆದಿದ್ದಾನೆ. ಆ ಬಳಿಕ ಮತ್ತೆ ಹೆಚ್ಚಿನ ವರದಕ್ಷಿಣೆ ತರುವಂತೆ ಮನೆಯವರೊಂದಿಗೆ ಸೇರಿಕೊಂಡು ಪದೇ ಪದೇ ದೈಹಿಕ ಮತ್ತು ಮಾನಸಿಕ ಹಿಂಸೆ ಜೊತೆಗೆ ಜೀವ ಬೆದರಿಕೆಯೊಡ್ಡಿ ಇದೀಗ ದುಬೈಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ದುಬೈ ಚಿನ್ನದ ಅಂಗಡಿಯೊಂದರಲ್ಲಿ ಉದ್ಯೋಗದಲ್ಲಿರುವ ಆರೋಪಿ ಬದ್ರುದ್ದೀನ್ ಮದುವೆಯಾದ ಆರಂಭದಲ್ಲಿ ತನ್ನನ್ನು ಕೂಡಾ ದುಬೈಗೆ ಕರೆದುಕೊಂಡು ಹೋಗಿದ್ದು, ಇದೀಗ ಊರಿಗೆ ಮರಳಿದ ಬಳಿಕ ಮನೆಯವರ ಕುಮ್ಮುಕ್ಕಿನಿಂದ ನನ್ನನ್ನು ಮನೆಯಲ್ಲೇ ಬಿಟ್ಟು ದುಬೈಗೆ ತೆರಳಿದ್ದಾನೆ. ಆರೋಪಿ ತಂದೆ ಅಬ್ದುಲ್ ಖಾದರ್, ತಾಯಿ ಸಾರಮ್ಮ, ಸಹೋದರ ತ್ವಾಹಿರ್, ಸಹೋದರನ ಪತ್ನಿ ಶಮೀಮಾ ಮತ್ತು ಆಕೆಯ ಅಕ್ಕನ ಗಂಡ ಸೈದುದ್ದೀನ್ ಯಾನೆ ಹೈದರ್ ಎಂಬವರು ಸೇರಿಕೊಂಡು ಆರೋಪಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಆರೋಪಿ ಪತ್ನಿ ಎಂಬಿಬಿಎಸ್ ಪದವೀಧರೆಯಾಗಿ ವೈದ್ಯ ವೃತ್ತಿ ಮಾಡಲು ಆಸಕ್ತರಾಗಿರುವುದು ಆರೋಪಿ ಮತ್ತು ಆತನ ಮನೆಯವರಿಗೆ ಸಮ್ಮತಿ ಇಲ್ಲದಿರುವುದೇ ಈ ವೈಮನಸ್ಸಿಗೆ ಕಾರಣ ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *