ಕ್ರೀಡೆಯಿಂದ ಸಮಾಜದ ನಾಯಕತ್ವ ಬೆಳೆಯುತ್ತದೆ: ಎಲ್.ವಿ ಅಮೀನ್
ಮುಂಬಯಿ: ಬಿಲ್ಲವ ಜಾಗೃತಿ ಬಳಗ (ರಿ.) ಮುಂಬಯಿ ತನ್ನ ಜಾಗೃತಿ ಕ್ರೀಡೋತ್ಸವ-2016ನ್ನು ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆಯಿಂದ ಚರ್ಚ್‍ಗೇಟ್ ಅಲ್ಲಿನ ಕರ್ನಾಟಕ ಸ್ಫೋರ್ಟಿಂಗ್ ಅಸೋಸಿಯೇಶನ್ ಮೈದಾನದಲ್ಲಿ
ಜರುಗಿಸಿತು. ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ ಅವರು ದೀಪ ಬೆಳಗಿಸಿ ಕ್ರೀಡೋತ್ಸವಕ್ಕೆ ಚಾಲನೆಯನ್ನಿತ್ತರು. ಅಪರಾಹ್ನ ಕ್ರೀಡೋತ್ಸವದ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ
ನಡೆಸಲ್ಪಟ್ಟಿದ್ದು ಮುಖ್ಯ ಅತಿಥಿಯಾಗಿ ಕನ್ನಡ ಸಂಘ ಸಾಂತಾಕ್ರೂಜ್‍ನ ಅಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಎಲ್.ವಿ ಅಮೀನ್ ಮತ್ತು ಗೌರವ ಅತಿಥಿಗಳಾಗಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ, ಗೌರವಾಧ್ಯಕ್ಷ ಸುರೇಶ್ ಎಸ್.ಪೂಜಾರಿ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಮತ್ತು ಭಾಗವಹಿಸಿದ ಸರ್ವ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಎಲ್.ವಿ ಅಮೀನ್ ಮಾತನಾಡಿ ಕ್ರೀಡೆ ಸಮಾಜದಲ್ಲಿನ ಪ್ರತಿಭೆಗಳನ್ನು ಗುರುತಿಸುತ್ತದೆ. ಕ್ರೀಡಾಸಕ್ತಿಯಿಂದ ಪ್ರತಿಷ್ಠೆಯ ಜಾಗೃತಿ ಸಾಧ್ಯವಾಗಿದೆ. ಆದುದರಿಂದ ಕ್ರೀಡೆಗೆ ಪ್ರೋತ್ಸಾಹ ನೀಡುವಲ್ಲಿ ಇಂತಹ ಕ್ರೀಡೋತ್ಸವಗಳ ಅತ್ಯವಶ್ಯವಾಗಿವೆ. ಇದೊಂದು ಸಮಾಜದ ಸ್ನೇಹ ಮಿಲನ ಆಗಿದ್ದು, ಇಂತಹ ಕ್ರಿಡೋತ್ಸವ ಏಕತೆಗೆ ಪುಷ್ಠಿಕರವಾಗಿದೆ. ಇದು ಸ್ಪರ್ಧೆಗಾಗಿ ಅಲ್ಲ ಸೌಹರ್ದತ್ವಕ್ಕಾಗಿ ಭಾಗಹಿಸುವ ಉತ್ಸವ ಆಗಿದೆ. ಇದು ಭಾಗವಹಿಸುವ ಸರ್ವ ಸ್ಪರ್ಧಾಳುಗಳ ವಿಜಯೋತ್ಸವ. ಕ್ರೀಡೆಯಿಂದ ನಾಯಕತ್ವ ಬೆಳೆಯುತ್ತದೆ. ಸಮಾಜ ಕಟ್ಟಲು ಇದು ಪೂರಕಎಂದು ತಿಳಿಸಿದರು.
ಬಿಲ್ಲವ ಪೂರ್ವಜರ ನಾಲ್ಕು ಸಂಸ್ಥೆಗಳ ಪದತ್ಯಾಗದಿಂದ ಮುಂಬಯಿಯಲ್ಲಿ ಬಿಲ್ಲವರ ಮಾತೃ ಸಂಸ್ಥೆಯೊಂದು ಹೆಮ್ಮರವಾಗಿ ಬೆಳೆದಿದ್ದು, ಕಾರಣಾಂತರದಿಂದ ಹೆಮ್ಮರದ ಕವಲುವೊಂದು ಕಡಿದು ಕೊಂಡಾಗ ಅದರ ಬೇರು ಮತ್ತು ಎಲೆಗಳಿಗೂ ನೋವಾಗಿದೆ. ಇದರಿಂದ ಹೆಮ್ಮರಕ್ಕೂ, ಕಡಿದುಬಿದ್ದ ಕೊಂಬೆಗೂ, ಎಲೆ, ಬೇರುಗಳಿಗೂ ನೋವಾಗಿದೆ. ಭವಿಷ್ಯತ್ತಿನಲ್ಲಿ ಬಿಲ್ಲವರೆಲ್ಲರೂ ಬಲಿಷ್ಠರಾಗುವಲ್ಲಿ ತಮ್ಮ ಏಕತೆಯನ್ನು ಮೆರೆಯ ಬೇಕಾಗಿದೆ. ಹಿರಿಯರ ತ್ಯಾಗಮಯ ಸೇವೆ, ಏಕತೆಯನ್ನು ತಿಳಿದು ಬ್ರಹ್ಮಶ್ರೀ ನಾರಾಯಣ ಗುರುಗಳ ಧ್ಯೇಯವನ್ನು ಮೈಗೂಡಿಸಿ ಮಾತೃಸಂಸ್ಥೆಯ ಮಡಿಲಲ್ಲಿ ಮತ್ತೆ ಕಂಗೋಳಿಸುವಂತಾಗಬೇಕು. ಹಿರಿಯರು ಕಟ್ಟಿ ಬೆಳೆಸಿದ ಸಂಘವೇ ದೊಡ್ಡದು ವ್ಯಕ್ತಿಗಳು ದೊಡ್ಡವರಲ್ಲ. ನಾವೆಲ್ಲರೂ ದೂರತ್ವವನ್ನು ಅರಿತು ಸಾಮೀಪ್ಯದಿಂದ ಒಗ್ಗೂಡುತ್ತಾ ಬಿಲ್ಲವ ಸಮಾಜದ ಏಕತೆಯಿಂದ ಸರ್ವರಿಗೂ ಮಾದರಿಯಾಗೋಣ ಎಂದೂ ಎಲ್.ವಿ ಅಮೀನ್ ಕರೆಯಿತ್ತರು. ಆರೋಗ್ಯಕರ ಬಾಳಿಗೆ ಕ್ರೀಡೆ ಪೂರಕವಾಗಿದೆ. ಇದರಲ್ಲಿ ಯುವಕರು ಮುದುಕರು ಅಂತರವಿಲ್ಲ. ಸ್ವಸ್ಥ್ಯದ ಹಿತದೃಷ್ಠಿಯಿಂದ ಆರೋಗ್ಯದ ಕಾಳಜಿ ವಹಿಸಿ ಅದಕ್ಕಾಗಿ ಕ್ರೀಡೆಯನ್ನು ಮೈಗೂಡಿಸಿ ಮಾನಸಿಕ ಮತ್ತು ದೈಹಿಕ ಸಂತೃಪ್ತಿ ಪಡೆಯಿರಿ ಎಂದು ಸೂರು ಕರ್ಕೇರರು ಹಿತನುಡಿಗಳನ್ನಾಡಿದರು. ಸುರೇಶ್ ಪೂಜಾರಿ ಮಾತನಾಡಿ ಗಿಡವಾಗಿದ್ದ ಬಳಗ ಸದ್ಯ ದಿನದಿನಕ್ಕೆ ಮರದಂತೆ ಬೆಳೆಯುತ್ತದೆ. ರವಿ ರಾ. ಅಂಚನ್ ಸೂಚಿಸಿದ ಹೆಸರು ಮೇಲೇರಿ ಮೆರೆಯುತ್ತಿದೆ. ಎನ್.ಟಿ.ಪೂಜಾರಿ ಮತ್ತುಪುರುಷೋತ್ತಮ ಕೋಟ್ಯಾನ್ ಅವರ ಅವಿರತ ಶ್ರಮ ರಾಮ-ಹನುಮಂತರಂತೆ ಬಳಗಕ್ಕೆ ಬಲನೀಡುತ್ತಿದೆ. ಇವರಂತಹ ಚಾಣಕ್ಯ, ಚಂದ್ರಗುಪ್ತರ ಕೂಡುವಿಕೆ ಭವಿಷ್ಯತ್ತಿನ ಪೀಳಿಗೆಗೆ ಪ್ರೇರಕವಾಗಿದ್ದು ಆ ಮೂಲಕ ಬಳಗವೂ ಬಲಯುತ ಗೊಳ್ಳಲಿ ಎಂದರು. ಮಹಿಳಾ ಮತ್ತು ಯುವ ವಿಭಾಗವು ತಮ್ಮ ಸಕ್ರೀಯತೆಯಿಂದ ಈ ಕ್ರೀಡಾಕೂಟ ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ದುಡ್ಡು ದೊಡ್ದದಲ್ಲ ಪ್ರೀತಿಯೇ ದೊಡ್ದದು ಎನ್ನುವುದು ಸಾಬೀತು ಆಗುತ್ತಿದೆ. ಎಲ್.ವಿ ಅಮೀನ್ ಅನಿಸಿಕೆಯಂತೆ ಹೆಮ್ಮರದ ಗೆಲ್ಲು ಮುರಿದ ನೋವು ಎಲ್ಲರಿಗಿದೆ. ಆದರೆ ನಾವು ಎಲ್ಲೂ ಬಿದ್ದಿಲ್ಲ. ಸಮಾಜದ ಏಕೀಕರಣಕ್ಕೆ ನಾವು ಸದಾ ಬದ್ಧರಿದ್ದು, ಭವಿಷ್ಯತ್ತಿನ್ನುದ್ದಕ್ಕೂ ಸಮಾಜಕ್ಕಾಗಿ ನಾವು ಯಾವೋತ್ತೂ ಒಂದಾಗಿರುತ್ತೇವೆ. ನಮ್ಮಲ್ಲಿನ ಯುವ ಉದ್ಯಮಿಗಳ ಪ್ರೋತ್ಸಾಹಕ್ಕಾಗಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಸಂಸ್ಥೆ ಇದೀಗಲೇ ನೊಂದಾಯಿಸಿದ್ದು ನನ್ನನ್ನು ಬಿಸಿಸಿಐ ಕಾರ್ಯಾಧ್ಯಕ್ಷನಾಗಿ ಆಯ್ಕೆಗೊಳಿಸಿರುವುದಕ್ಕೆ ಅಭಾರಿ ಆಗಿದ್ದೇನೆ. ಈ ಸಂಸ್ಥೆಯನ್ನು ಬಿಲ್ಲವರ ಮಾದರಿ ಸಂಸ್ಥೆಯಾಗಿಸಿ ಬೆಳೆಸುವ ಭರವಸೆ ನೀಡುತ್ತೇನೆ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಎನ್.ಟಿ ಪೂಜಾರಿ ತಿಳಿಸಿದರು. ಕಾರ್ಯಕ್ರಮದಲ್ಲಿ ಬಳಗದ ಉಪಾಧ್ಯಕ್ಷರುಗಳಾದ ಡಿ.ಬಿ ಅಮೀನ್ ಮತ್ತು ಪುರುಷೋತ್ತಮ ಎಸ್.ಕೋಟ್ಯಾನ್, ಗೌರವ ಕೋಶಾಧಿಕಾರಿ ಪದ್ಮನಾಭ ಎಸ್.ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಾರದ ಸೂರು ಕರ್ಕೇರ, ಮಾಜಿ ಮಹಿಳಾ ಕಾರ್ಯಧ್ಯಕ್ಷೆ ಸಂತೋಷಿ ಎಸ್.ಪೂಜಾರಿ, ಬಳಗದ ಮುಖವಾಣಿ `ಗುರುತು’ ಗೌರವ ಸಂಪಾದಕಬಾಬು ಶಿವ ಪೂಜಾರಿ, ಬಳಗದ ಮುಂದಾಳುಗಳಾದ ಎನ್.ಪಿ ಸುವರ್ಣ, ಜಿ.ಡಿ ಕರ್ಕೇರ, ವಿಜಯ ಕೋಟ್ಯಾನ್, ಚಿತ್ರಾಪು ಕೆ.ಎಂ ಕೋಟ್ಯಾನ್, ಯಶೋಧ ಎನ್.ಟಿ ಪೂಜಾರಿ, ಕೃಪಾ ಭೋಜರಾಜ್, ಪೂಜಾ ಪಿ.ಕೋಟ್ಯಾನ್, ಪ್ರಭಾ ಸುವರ್ಣ ದಾದರ್, ತಾರಾ ಜೆ.ಕೋಟ್ಯಾನ್, ಗಿರಿಜಾ ಚಂದ್ರಶೇಖರ್, ಸುಪ್ರಿಯಾ ವಿ.ಕೋಟ್ಯಾನ್ ಸೇರಿದಂತೆ ಸ್ಥಾನಿಯ ಸಮಿತಿಯ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು, ಅಧ್ಯಕ್ಷ ಎನ್.ಟಿ ಪೂಜಾರಿ ಅವರು ಲಕ್ಷ್ಮಣ ಪೂಜಾರಿ ಕೊಡೇರಿ, ಡಾ| ನಿತೇಶ್ ಕರ್ನಿರೆ, ಸದಾನಂದ ಪೂಜಾರಿ ಮತ್ತು ದಿನೇಶ್ ಪೂಜಾರಿ ಅವರ ವಿಶೇಷ ಸೇವೆಗಾಗಿ ಪುಷ್ಪಗುಪ್ಚವನ್ನಿತ್ತು ಗೌರವಿಸಿದರು. ಬಳಗದ ಗೌ| ಪ್ರ| ಕಾರ್ಯದರ್ಶಿ ಕೇಶವ ಕೆ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯ ಕಾರ್ಯಾಧ್ಯಕ್ಷರನ್ನಾಗಿ ಎನ್.ಟಿ ಪೂಜಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಗೊಳಿಸಿದ ಬಗ್ಗೆ ಮತ್ತು ಬಿಸಿಸಿಐ ಮಂಡಳಿಯ ಹನ್ನೆರಡು ನಿರ್ದೇಶಕರ ಆಯ್ಕೆಯ ಬಗ್ಗೆಯೂ ಪ್ರಕಟಿಸಿದರು. ಯುವ ವಿಭಾಗದಕಾರ್ಯಧ್ಯಕ್ಷ ಮಹೇಂದ್ರ ಸೂರು ಕರ್ಕೇರ ಸ್ವಾಗತಿಸಿದರು. ಹರೀಶ್ ಜಿ.ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮಣ ಪೂಜಾರಿ ಕೊಡೇರಿ, ಭಾಸ್ಕರ ಕರ್ನಿರೆ ಕ್ರೀಡಾ ನಿರ್ವಹಣೆಗೈದರು. ಯುವವಿಭಾಗದ ಕಾರ್ಯದರ್ಶಿ ಜೆ.ಎಂಕೋಟ್ಯಾನ್ ಅಭಾರ ಮನ್ನಿಸಿದರು.














