ಕೈಕಂಬ: ಗುರುಪುರ ಕೈಕಂಬಕ್ಕೆ ಆಗಮಿಸುವ ಸಾರ್ವಜನಿಕರು ಈಗ ಮೂಗುಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಕಾರಣ ಇಷ್ಟೆ ಹಲವು ತಿಂಗಳ ಹಿಂದೆ ಗಂಜಿಮಠ ಪಂಚಾಯತ್ನವರು ಒಳಚರಂಡಿಯನ್ನು ತೆರೆದಿದ್ದು, ಆ ಬಳಿಕ ಇದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಸಾರ್ವಜನಿಕರು ಗಂಜಿಮಠ ಗ್ರಾಮ ಪಂಚಾಯತ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕೈಕಂಬದಲ್ಲಿ ತೆರೆಯಲಾದ ಒಳಚರಂಡಿಯ ದೃಶ್ಯ

ಗುರುಪುರ ಕೈಕಂಬ ಪ್ರದೇಶ ನಾಲ್ಕು ಗ್ರಾಮ ಪಂಚಾಯತ್ಗಳಿಗೆ ಹರಿದುಹಂಚಿಹೋಗಿದೆ. ಈಗ ಗಟಾರ ತೆರೆದ ಪ್ರದೇಶ ಗಂಜಿಮಠ ಪಂಚಾಯತ್ಗೆ ಸೇರಿದ ಜಾಗ. ಕೆಲವು ತಿಂಗಳ ಹಿಂದೆ ಒಳಚರಂಡಿಯಲ್ಲಿ ಕಸ ತುಂಬಿಕೊಂಡ ಕಾರಣ ಅದು ಬಂದ್ ಆಗಿ ಅದರ ನೀರು ಹೊರಗಡೆ ಹರಿಯಲು ಆರಂಭವಾಗಿತ್ತು. ಇದರಿಂದಾಗಿ ಪ್ರದೇಶವೆಲ್ಲಾ ಕೆಟ್ಟ ವಾಸನೆಯನ್ನು ಬೀರಿತ್ತು. ಈ ಬಗ್ಗೆ ಸ್ಥಳೀಯರು ಪಂಚಾಯತನ್ನು ದೂರಿಕೊಂಡಿದ್ದಲ್ಲದೆ, ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯೂ ಬಿತ್ತರವಾಗಿತ್ತು. ಕೊನೆಗೂ ಎಚ್ಚೆತ್ತ ಗ್ರಾಮ ಪಂಚಾಯತ್ ಒಳಚರಂಡಿಯನ್ನು ತೆರೆದು ಒಳಗಿನ ಕೊಳಚೆ ನೀರು ಸುಗಮವಾಗಿ ಹರದಿಹೋಗಲೆಂದು ಅಲ್ಲಿನ ಒಳಚರಂಡಿಯ ಮೇಲೆ ಹಾಕಿದ್ದ ಹಾಸುಕಲ್ಲನ್ನು ತೆರೆದಿತ್ತು.
ಒಳಗಡೆ ಕಸ ತುಂಬಿಕೊಂಡಿರುವುದರಿಂದ ಚಿಂತೆಗೀಡಾದ ಆಡಳಿತ ಸಿಬ್ಬಂದಿ ಇದರಲ್ಲಿ ಕೊಳಚೆ ನೀರು ತುಂಬಲು ಈ ಚರಂಡಿಗೆ ಹೋಟೆಲ್ನವರು ತನ್ನ ಮಲಿನ ನೀರನ್ನು ಬಿಡುವುದೇ ಕಾರಣ ಎಂದು ಅರಿತು ಹೋಟೆಲ್ನಿಂದ ಒಳಚರಂಡಿಗೆ ತಲುಪಿಸುವ ಪೈಪನ್ನು ಕತ್ತರಿಸಿ ಹಾಕಿತ್ತು. ಇದರಿಂದ ಕೆಂಡವಾದ ಹೋಟೆಲ್ ಮಾಲಿಕರು ಸ್ಥಳಕ್ಕೆ ಪಿಡಿಓ ಜೊತೆ ಆಗಮಿಸಿದ್ದ ಗ್ರಾ.ಪಂ ಅಧ್ಯಕ್ಷೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದಾದ ಮೇಲೆ ಈ ತೆರೆದ ಒಳಚರಂಡಿಗೆ ಕಾಯಕಲ್ಪ ಸಿಕ್ಕು ಸಮಸ್ಯೆಗೆ ಮುಕ್ತಿ ಕಾಣಬಹುದೆಂದು ಊಹಿಸಲಾಗಿತ್ತು. ಆದರೆ ಈ ಭರವಸೆ ಹುಸಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಕಳೆದ ಎರಡು ತಿಂಗಳ ಹಿಂದೆ ಓಪನ್ ಮಾಡಿದ ಒಳಚರಂಡಿಯನ್ನು ಇನ್ನೂ ಮುಚ್ಚಲಾಗಿಲ್ಲ, ಅಲ್ಲದೆ ಅದರ ಕಸವನ್ನು ತೆಗೆಯದೆ ನೀರು ಸರಾಗವಾಗುವಂತೆಯೂ ಮಾಡಿಲ್ಲ; ಆದ್ದರಿಂದ ಅದರ ನೀರೆಲ್ಲಾ ಹೊರಗಡೆ ಚೆಲ್ಲುತ್ತಿದ್ದು ಸಾಂಕ್ರಾಮಿಕ ರೋಗಗಳ ಭಯವೂ ಆವರಿಸಿದೆ. ಇದನ್ನು ಈ ಕೂಡಲೇ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.
ಬಾಕ್ಸ್
ಕಸ ತುಂಬಿ ಭರ್ತಿಯಾದ ಒಳಚರಂಡಿ
ಕೈಕಂಬದ ರಸ್ತೆ ಅಗಲೀಕರಣವಾಗುವ ಸಂದರ್ಭ ಸುಸಜ್ಜಿತ ರೀತಿಯ ಒಳಚರಂಡಿ ನಿರ್ಮಿಸಲಾಗಿತ್ತು, ಆದರೆ ಇದಕ್ಕೆ ಈಗ ಕಸ ತುಂಬಿಕೊಂಡಿರುವ ಕಾರಣ ಒಳಚರಂಡಿ ಭರ್ತಿಯಾಗಿದ್ದು ಕೊಳಚೆ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿದೆ. ಇದರ ಭಯಾನಕ ಪರಿಸ್ಥಿತಿ ಅರಿವಾಗಬೇಕಾದರೆ ಮಳೆಗಾಲ ಬರಬೇಕು. ಮಳೆಗಾಲದಲ್ಲಿ ಭೀಕರ ನೆರೆ ಪರಿಸ್ಥಿತಿ ಉಂಟಾಗುತ್ತಿರುವುದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಇನ್ನಾದರೂ ಈ ಸಮಸ್ಯೆಗೆ ಮುಕ್ತಿ ಕಾಣಬಹುದೇ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನತೆ ಇದ್ದಾರೆ.
