ಮೂಡುಬಿದರೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮೂಡುಬಿದರೆ ವಲಯಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಶಿರ್ತಾಡಿ ಹೋಲಿ ಏಂಜಲ್ಸ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರೌಢಶಾಲಾ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿರ ಎರಡೂ ವಿಭಾಗದಲ್ಲೂ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
ಪ್ರೌಢಶಾಲಾ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ
ಪ್ರಾಥಮಿಕ ವಿಭಾಗದಲ್ಲಿ ಶಿರ್ತಾಡಿಯ ಹೋಲಿ ಏಂಜಲ್ಸ್ ಸಮಗ್ರ ಪ್ರಶಸ್ತಿ
ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ರಾಜು ಸೋಪಾನದತ್ತ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಉತ್ತಮ್.ಪಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು. ಬಾಲಕಿರ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯ ರಕ್ಷಿತಾ ಶೆಟ್ಟಿ ಮೂಡಿಬಂದರು. 17 ವರ್ಷ ಮೇಲ್ಪಟ್ಟು ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ನಾಗೇಂದ್ರ ಅಣ್ಣಪ್ಪ ನಾಯ್ಕ್,ಬಾಲಕಿರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಜೋತ್ಸ್ನಾ ಎಂ.ಎಸ್, ಸೃಷ್ಟಿ ಉಳವಪ್ಪ ಕಲಿವಾಳ, ಮಾಲಾಶ್ರೀ ಎಂ.ಬಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದಿದ್ದಾರೆ.
ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಲಿಲ್ಲಿ ಶೆರಾವೋ ಅವರನ್ನು ಸಮಾರಂಭದಲ್ಲಿಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ತಾ.ಪಂ ಸದಸ್ಯ ಪ್ರಕಾಶ್, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಮೂಡುಬಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಪ್ರಫುಲ್ಲ ಎಂ ಶೆಟ್ಟಿ, ವಲಯಾಧ್ಯಕ್ಷ ನಾಗೇಶ್.ಪಿ, ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಅಲ್ಬುಕರ್ಕ್ , ಬೆಳುವಾಯಿ ಮೈನ್ ಶಾಲೆಯ ಮುಖ್ಯ ಶಿಕ್ಷಕ ಎಂ.ಫಣಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.
ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವತಿಯಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡುಬಿದರೆ ವಲಯ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.
ವಲಯಮಟ್ಟದ ಸಹಿತ ವಿವಿಧ ಹಂತದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಕುರಿತು ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಬಲ್ಲ ಕ್ರೀಡೆಗೆ ಜೀವನಶೈಲಿ ಬದಲಾಯಿಸುವ ಶಕ್ತಿಯಿದೆ.
– ಐವನ್ ಡಿ’ಸೋಜಾ
ವಿಧಾನಪರಿಷತ್ ಸದಸ್ಯ

