ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಸಮೀಪದ ಬೋವಿನಪಾಡಿ ಎಂಬಲ್ಲಿ ಕಳೆದ ಶನಿವಾರ ರಾತ್ರಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿಸಿ ಕೂಲಿ ಕಾರ್ಮಿಕ ಸುರೇಶ ಪೂಜಾರಿ (38) ಎಂಬವರನ್ನು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದ ಐವರು ಆರೋಪಿಗಳನ್ನು ಬುಧವಾರ ಬೆಳಿಗ್ಗೆ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ಸ್ಥಳೀಯ ನಿವಾಸಿ ಹರೀಶ ಯಾನೆ ಕೋಟಿ ಪೂಜಾರಿ, ವಸಂತ, ಹೇಮಚಂದ್ರ, ನೀಲಪ್ಪ ಮತ್ತು ರಮೇಶ ಎಂದು ಗುರುತಿಸಲಾಗಿದೆ.
ಇಲ್ಲಿನ ಕೂಡಿಬೈಲು ನಿವಾಸಿ ದಿವಂಗತ ಶಿವಯ್ಯ ಪೂಜಾರಿ ಪುತ್ರನಾಗಿರುವ ಸುರೇಶ ಪೂಜಾರಿ ಅನಾರೋಗ್ಯಪೀಡಿತ ತಾಯಿ ಹೊನ್ನಮ್ಮ ಮತ್ತು ಬೀಡಿ ಕಟ್ಟುತ್ತಿರುವ ಪತ್ನಿ ಸುನಂದರೊಂದಿಗೆ ತೀರಾ ಬಡತನದಲ್ಲಿ ಜೀವಿಸಿಕೊಂಡಿದ್ದರು. ಕಳೆದ ಶನಿವಾರ ಬೆಳಿಗ್ಗೆ ಎಂದಿನಂತೆ ಪ್ರಮುಖ ಆರೋಪಿ ಎನ್ನಲಾದ ಸ್ಥಳೀಯ ನಿವಾಸಿ ಹರೀಶ ಮತ್ತಿತರರ ಜೊತೆಗೆ ಕೂಲಿ ಕೆಲಸಕ್ಕೆಂದು ಹೋಗಿ ವಾಪಾಸು ಬರುವಾಗ ಸುರೇಶನಿಗೆ ಮದ್ಯ ಕುಡಿಸಿ ನೀರಿಗೆ ತಳ್ಳಿ ವ್ಯವಸ್ಥಿತವಾಗಿ ಪೂರ್ವದ್ವೇಷದಿಂದ ಈ ಕೊಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
